ವಿಶ್ವದಾದ್ಯಂತ ಬಿಡುಗಡೆಯಾಗಿರುವ ದೇಶಭಕ್ತಿಯ ಚಿತ್ರ ಆಜಾದ್ ಭರತ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ಅಭಿನಯಿಸಿರುವ ರೂಪಾ ಅಯ್ಯರ್ ಅವರ ಗಂಭೀರ ಅಭಿನಯ, ವಾಸ್ತವಾಧಾರಿತ ಕಥಾವಸ್ತು ಮತ್ತು ಸಂಶೋಧನೆ ಆಧಾರಿತ ನಿರೂಪಣೆ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ. ಚಿತ್ರವು ನಾನ್-ಲಿನಿಯರ್ ಕಥನ ಶೈಲಿಯಲ್ಲಿ ಸಾಗುತ್ತಾ, ದೇಶಕ್ಕಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದ ಅಪರಿಚಿತ ನಾಯಕಿ ನೀರಆರ್ಯ ಅವರ ಬಲಿದಾನವನ್ನು ಅತ್ಯಂತ ಸಂವೇದನಾಶೀಲವಾಗಿ ಚಿತ್ರಿಸುತ್ತದೆ.
ಈ ಗಂಭೀರ ವಿಷಯಕ್ಕೆ ಸೂಕ್ತವಾದ ಆತ್ಮ ಮತ್ತು ಭಾವನಾತ್ಮಕ ಆಳವನ್ನು ನೀಡಿರುವುದು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರ ಸಂಗೀತ. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೌತಮ್ ಶ್ರೀವತ್ಸ ಅವರು ‘ಆಜಾದ್ ಭರತ್’ ಚಿತ್ರಕ್ಕೆ ನೀಡಿರುವ ಸಂಗೀತ ಈ ಚಿತ್ರದ ಪ್ರಮುಖ ಶಕ್ತಿ. ಜೀ ಮ್ಯೂಸಿಕ್ ಕಂಪನಿಯ ಮೂಲಕ ಬಿಡುಗಡೆಯಾದ ಹಾಡುಗಳು ದೇಶಭಕ್ತಿಯ ಭಾವವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸುತ್ತವೆ. ಅವರ ಸಂಗೀತ ಸಂಯೋಜನೆ, ಅರೆಂಜ್ಮೆಂಟ್ ಮತ್ತು ಸೌಂಡಿಂಗ್ ಬಹಳ ತಾಜಾತನದಿಂದ ಕೂಡಿದ್ದು, ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ.
ಚಿತ್ರವನ್ನು ನೋಡಿದ ಬಳಿಕ ಪ್ರೇಕ್ಷಕರು ಖಂಡಿತವಾಗಿ ಬ್ಯಾಕ್ಗ್ರೌಂಡ್ ಸ್ಕೋರ್ ಅಭಿಮಾನಿಗಳಾಗುತ್ತಾರೆ. ಕಥೆಯನ್ನು ಮೀರಿಸದೇ, ಪ್ರತಿಯೊಂದು ದೃಶ್ಯವನ್ನೂ ಸೂಕ್ಷ್ಮವಾಗಿ ಎತ್ತಿಹಿಡಿಯುವ ಹಿನ್ನೆಲೆ ಸಂಗೀತ ಚಿತ್ರದ ಭಾವನಾತ್ಮಕ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮೆಲೋಡಿಗಳ ಸೌಂಡಿಂಗ್ ಚಿತ್ರದ ಕಾಲಘಟ್ಟ ಮತ್ತು ಕಥೆಗೆ ಅತ್ಯಂತ ಸೂಕ್ತವಾಗಿದೆ. ಚಿತ್ರದ ಮತ್ತೊಂದು ಪ್ರಮುಖ ಅಂಶವೆಂದರೆ ಅತ್ಯುತ್ತಮ ಸೌಂಡ್ ಡಿಸೈನ್. ಡಾಲ್ಬಿ ಅಟ್ಮಾಸ್ ಸೌಂಡಿನಲ್ಲಿ ಈ ಚಿತ್ರವನ್ನು ನೋಡಿದರೆ ಸಂಗೀತ ಮತ್ತು ಧ್ವನಿಯ ಅನುಭವ ಸಂಪೂರ್ಣವಾಗಿ ಆಸ್ವಾದಿಸಬಹುದು.
ಈ ಸಂಗೀತ ಹಾಗೂ ಸೌಂಡ್ ವಿಭಾಗದ ಸಂಪೂರ್ಣ ಕಾರ್ಯಕ್ಕೆ ಬೆಂಬಲವಾಗಿ ನಿಂತಿರುವ ಗೌರವ್ ಅವರ ಕೊಡುಗೆಯೂ ಶ್ಲಾಘನೀಯ. ಸೌಂಡ್ ಡಿಸೈನ್ ಅನ್ನು ವಾಸುದೇವನ್ ಅವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ, ‘ಆಜಾದ್ ಭರತ್’ ಚಿತ್ರದ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಗೌತಮ್ ಶ್ರೀವತ್ಸಾ ಅವರಿಗೆ ಪೂರ್ಣ ಅಂಕಗಳನ್ನು ನೀಡಲೇಬೇಕು. ಅವರ ಸಂಗೀತ ಈ ದೇಶಭಕ್ತಿಯ ಕಥೆಗೆ ಜೀವ ತುಂಬಿ, ಚಿತ್ರವನ್ನು ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತೆ ಮಾಡಿದೆ.















