ಮನೆ ಅಪರಾಧ ಬಿರು ಬಿಸಿಲಿಗೆ ಕಲ್ಲಿನ ಕೋರೆಯಲ್ಲಿಟ್ಟ ಜಿಲೆಟಿನ್​​ ಕಡ್ಡಿಗಳು ಸ್ಫೋಟ; 15ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಬಿರು ಬಿಸಿಲಿಗೆ ಕಲ್ಲಿನ ಕೋರೆಯಲ್ಲಿಟ್ಟ ಜಿಲೆಟಿನ್​​ ಕಡ್ಡಿಗಳು ಸ್ಫೋಟ; 15ಕ್ಕೂ ಹೆಚ್ಚು ಮನೆಗಳಿಗೆ ಹಾನಿ

0

ಬಂಟ್ವಾಳ(ದಕ್ಷಿಣ ಕನ್ನಡ): ಕ್ವಾರಿಯೊಂದರಲ್ಲಿ ಕಲ್ಲು ಒಡೆಯಲು ತಂದಿಟ್ಟ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಫೋಟಗೊಂಡು ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲಮೂಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ಮಂಗಳವಾರ ನಡೆದಿದೆ.

Join Our Whatsapp Group

ಎಸ್ಪಿ ಯತೀಶ್ ಕುಮಾರ್ ಸೂಚನೆಯಂತೆ ಕ್ವಾರಿಯ ಮ್ಯಾನೇಜನರ್‌ನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ಸಂಪೂರ್ಣ ವಿವರ: ಮಾಡತ್ತಡ್ಕದ ಕೋರೆಯಲ್ಲಿ ಕಲ್ಲು ಒಡೆಯಲು ಸ್ಫೋಟಕಗಳನ್ನು ತರಲಾಗಿತ್ತು. ಕಲ್ಲಿನ ರಾಶಿಯ ಮಧ್ಯದಲ್ಲಿ ಒಂದು ಬಾಕ್ಸ್​ ಡಿಟೋನೇಟರ್​ ಹಾಗೂ 200 ಜಿಲೆಟಿನ್​ ಕಡ್ಡಿಗಳನ್ನು ಒಟ್ಟಿಗಿಡಲಾಗಿತ್ತು. ಬಿಸಿಲಿನ ತೀವ್ರತೆಗೆ ಮಧ್ಯಾಹ್ನ 1.25ರ ಸುಮಾರಿಗೆ ಸ್ಫೋಟಗೊಂಡಿದೆ. ಸ್ಫೋಟದಿಂದ ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿದ್ದ ಮನೆಗಳಿಗೆ ಹಾನಿಯಾಗಿದೆ. ನೂರು ಮೀಟರ್​ ದೂರದಲ್ಲಿರುವ ಎರಡು ಮನೆಗಳ ಛಾವಣಿ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿವೆ. ಸ್ಫೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್​ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ 1 ಕಿ.ಮೀ ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಸಣ್ಣಪುಟ್ಟ ಪ್ರಮಾಣದ ಹಾನಿಯಾಗಿದೆ.

ಸ್ಫೋಟದ ತೀವ್ರತೆಗೆ ಮನೆಗಳಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಹೆಂಚುಗಳು, ಕಿಟಕಿಯ ಗಾಜು, ಛಾವಣಿಗೆ ಹಾಸಿದ ಸಿಮೆಂಟ್ ಶೀಟ್ ಪುಡಿಯಾಗಿದೆ.

 ಗೋಡೆ ಗಡಿಯಾರ, ಕೆಲವು ಮನೆಯ ಟಿವಿ ಕೆಟ್ಟುಹೋಗಿವೆ. ವಿಟ್ಲಪೇಟೆಯ ಹಲವು ಕಡೆಯಲ್ಲಿ ವಸ್ತುಗಳು ಕಪಾಟುಗಳಿಂದ ನೆಲಕ್ಕುರುಳಿವೆ. ಮನೆಯ ಪಿಲ್ಲರ್​ಗಳೂ ಬಿರುಕು ಬಿಟ್ಟಿವೆ. ಕೋರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಲ್ಲಿನ ರಾಶಿ ಇದ್ದು ಇದರ ತಪ್ಪಲು ಪ್ರದೇಶದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ದಾಸ್ತಾನಿರಿಸಲಾಗಿತ್ತು. ಸ್ಫೋಟದಿಂದ ಅಕ್ಕಪಕ್ಕದ ಬಯಲು ಪ್ರದೇಶದಲ್ಲಿದ್ದ ಮುಳಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಪೋಟಕಗಳನ್ನು ತಂದು ಬೇಜವಾಬ್ದಾರಿತನದಿಂದ ಇಟ್ಟು ಹೋದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುತ್ತೇವೆ. ಭೂಕಂಪದ ಅನುಭವವಾಗಿದ್ದು, ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿದ್ದೇವೆ. ಮನೆಗಳ ಛಾವಣಿ ಸೇರಿ ವಸ್ತುಗಳಿಗೆ ಹಾನಿಯಾದ ಬಗ್ಗೆ ದೂರುಗಳು ಬಂದಿದೆ. ಸುಮಾರು 12 ಮನೆಗಳಿಗೆ ಹಾನಿಯಾಗಿರುವ ಮಾಹಿತಿಯಿದೆ ಎಂದು ಕಂದಾಯ ಇಲಾಖೆ ತಿಳಿಸಿದ್ದರೂ, ಸ್ಥಳೀಯರು 15 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ ಎಂದು ಎಸ್ಪಿ ಯತೀಶ್​ ಎನ್​. ತಿಳಿಸಿದರು.

ಕಲ್ಲು ಗಣಿಗಾರಿಕೆಗೆ ಆಕ್ರೋಶ: ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ .ಕೆ ಅವರೆದುರು ಸ್ಥಳೀಯ ನಿವಾಸಿಗಳು ಗಣಿಗಾರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದ ಒಂದೂವರೆ ತಾಸಿನ ಬಳಿಕ ಆಗಮಿಸಿದ ವಿಟ್ಲ ಪೊಲೀಸರಿಗೆ ಧಿಕ್ಕಾರ ಕೂಗಿದ್ದಾರೆ.

ಕಲ್ಲು ಸ್ಫೋಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ತೀವ್ರ ಶಾಖದಿಂದಾಗಿ ಸ್ಫೋಟಗೊಂಡಿವೆ. ಸ್ಫೋಟದ ಶಬ್ದ ಮತ್ತು ನಡುಕ ಗ್ರಾಮದ 4 ಕಿಲೋಮೀಟರ್ ವ್ಯಾಪ್ತಿಯಲ್ಲಿಯೂ ಕಂಡುಬಂದಿದೆ. ಕಂಪನದ ಕೇಂದ್ರಬಿಂದುವಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಇತರ 15 ಮನೆಗಳಿಗೆ ಹಾನಿಯಾಗಿದೆ. ಕ್ವಾರಿಯಲ್ಲಿ ಪುಡಿಮಾಡಿದ ಕಲ್ಲುಗಳ ರಾಶಿಯ ಮಧ್ಯದಲ್ಲಿ ಸುಮಾರು 200 ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್​ಗಳನ್ನು ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದಾಸ್ತಾನು ಜಾಗ ಹಾಗೂ ಸ್ಫೋಟದ ಸ್ಥಳಕ್ಕೆ ಎಸ್ಪಿ ಯತೀಶ್ ಕುಮಾರ್​, ಬಂಟ್ವಾಳ ತಹಶೀಲ್ದಾರ್​ ಡಿ.ಅರ್ಚನಾ ಭಟ್, ಕಂದಾಯ ನಿರೀಕ್ಷಕ ರವಿ, ಪಿಡಿಒ ಸುಜಯ್ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.