ಮನೆ ಕಾನೂನು ಸರ್ಕಾರಿ ಉದ್ಯೋಗಾಂಕ್ಷಿಗಳ ಲಿಂಗ ಸೂಕ್ಷ್ಮತೆ ಮೌಲ್ಯಮಾಪನ: ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಸರ್ಕಾರಿ ಉದ್ಯೋಗಾಂಕ್ಷಿಗಳ ಲಿಂಗ ಸೂಕ್ಷ್ಮತೆ ಮೌಲ್ಯಮಾಪನ: ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

0

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ನ್ನು (ಪಿಒಎಸ್‌ಎಚ್‌- ಪಾಶ್‌ ಕಾಯಿದೆ) ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕಾಗಿ ನಾಲ್ಕು ವಾರಗಳಲ್ಲಿ ನಿಯಮಾವಳಿ ರೂಪಿಸುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡುಸರ್ಕಾರಕ್ಕೆ ಸೂಚಿಸಿದೆ.

Join Our Whatsapp Group

ರಾಜ್ಯ ಮಹಿಳಾ ಆಯೋಗ ಸಿದ್ಧಪಡಿಸಿದ ಕರಡು ನಿಯಮಗಳನ್ನು ಪರಿಗಣಿಸಿ, ಅಗತ್ಯ ಬದಲಾವಣೆಗಳನ್ನು ಮಾಡಿ ಅಂತಿಮ ನಿಯಮಗಳಿಗೆ  ಅನುಮೋದನೆ ನೀಡುವಂತೆ ಹಾಗೂ ರಾಜ್ಯಾದ್ಯಂತ ಸಂಘಟಿತ ಮತ್ತು ಅಸಂಘಟಿತ ವಲಯಗಳೆರಡಕ್ಕೂ ಈ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಆರ್.ಎನ್. ಮಂಜುಳಾ ಅವರು ನವೆಂಬರ್ 21ರಂದು ಹೊರಡಿಸಿದ ಆದೇಶದಲ್ಲಿ ಸೂಚಿಸಿದ್ದಾರೆ.

ಇದೇ ವೇಳೆ ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರುವ ಲಿಂಗ ಸೂಕ್ಷ್ಮತೆಯನ್ನು ಅಳೆಯುವುದಕ್ಕಾಗಿ ಅವರು ಸರ್ಕಾರಿ ಉದ್ಯೋಗಗಳಿಗೆ ಬರೆಯುವ ಪರೀಕ್ಷೆಗಳಲ್ಲ, ಹುದ್ದೆ ಬಡ್ತಿ, ವೇತನ ಬಡ್ತಿ, ಇಲಾಖಾ ಪರೀಕ್ಷೆಗಳಲ್ಲಿ ಲಿಂಗ ಸೂಕ್ಷ್ಮತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸೇರಿಸಬಹುದೇ ಎಂಬ ಕುರಿತು ಕಾರ್ಯಸಾಧ್ಯತಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಹೇಳಿದೆ.

ಮತ್ತೊಂದೆಡೆ, ರಾಜ್ಯದ ಕೆಲಸದ ಸ್ಥಳಗಳಲ್ಲಿ ಪೋಶ್‌ ಕಾಯಿದೆಯನ್ವಯ ರಚಿಸಲಾದ ಪ್ರತಿಯೊಂದು ಆಂತರಿಕ ದೂರುಗಳ ಸಮಿತಿಗಳನ್ನು ಲೆಕ್ಕ ಹಾಕಬೇಕು. ಅದಕ್ಕೆಂದೇ ಜಾಲತಾಣ ರೂಪಿಸಬೇಕು ಎಂದು ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ಅಂತಹ ಜಾಲತಾಣ, ಆಂತರಿಕ ದೂರುಗಳ ಸಮಿತಿಗಳ ಸಂಖ್ಯೆ, ಅವುಗಳ ಸದಸ್ಯರು, ಅಂತಹ ಸಮಿತಿಗಳು ಸ್ವೀಕರಿಸಿದ ಕೆಲಸದ ಸ್ಥಳದಲ್ಲಿ ನಡೆದ ಲೈಂಗಿಕ ಕಿರುಕುಳದ ದೂರುಗಳು, ತೆಗೆದುಕೊಂಡ ಕ್ರಮ ಇತ್ಯಾದಿಗಳ ಬಗ್ಗೆ ಮಾಹಿತಿ ಒದಗಿಸಲು ಡ್ಯಾಶ್‌ಬೋರ್ಡ್ ರಚಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.

ಕಾಯಿದೆಯನ್ನು ಪ್ರಚಾರ ಮಾಡಲು ಮತ್ತು ಕಾಯಿದೆಯ ಸೆಕ್ಷನ್ 24ಕ್ಕೆ ಅನುಗುಣವಾಗಿ ಅದನ್ನು ಜಾರಿಗೊಳಿಸಲು ನಿಗದಿಪಡಿಸಿದ ಹಣಕಾಸಿನ ವಿವರಗಳನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ಸಿಬ್ಬಂದಿ ಸದಸ್ಯರೊಬ್ಬರ ವಿರುದ್ಧ ವಿದ್ಯಾರ್ಥಿಗಳು ಮತ್ತು ಇಂಟರ್ನ್‌ಗಳು ತೋರಿದ ಲೈಂಗಿಕ ದುರ್ವರ್ತನೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಕನ್ಯಾಕುಮಾರಿ ಜಿಲ್ಲೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿದೆ.

ಪ್ರಕರಣ ನ್ಯಾಯಾಲಯದ ಅಂಗಳದಲ್ಲಿರುವಂತೆಯೇ ಅರ್ಜಿದಾರರನ್ನು ಸೇವೆಯಿಂದ ಅಮಾನತುಗೊಳಿಸಿದ್ದಕ್ಕೆ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ ಅಮಾನತು ಆದೇಶವನ್ನು ರದ್ದುಗೊಳಿಸಿದೆ. ಇದೇ ವೇಳೆ ಅರ್ಜಿಯ ವ್ಯಾಪ್ತಿಯನ್ನು ವಿಸ್ತರಿಸಿದ ಅದು ಪೋಶ್‌ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.