ಮೈಸೂರು(Mysuru): ಕೋವಿಡ್ 4ನೇ ಅಲೆಯಿಂದ ತಪ್ಪಿಸಿಕೊಳ್ಳಬೇಕು ಅಂದರೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(Dr.k.Sudhakar) ಸಲಹೆ ನೀಡಿದರು.
ಜೆಎಸ್ ಎಸ್ ವೈದಕೀಯ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಸೊಸೈಟಿ ಫಾರ್ ಎಥೋ ಫಾರ್ಮಾಕಾಲಜಿ ಸಮ್ಮೇಳನವನ್ನ ಆರೋಗ್ಯ ಸಚಿವ ಡಾ ಸುಧಾಕರ್ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ನಾಲ್ಕನೇ ಅಲೆಯ ಭೀತಿ ದೆಹಲಿ, ಉತ್ತರ ಭಾರತದ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಒಳಾಂಗಣ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು ಎಂದ ಸಲಹೆ ನೀಡಿದ್ದೇವೆ. ಆದರೆ ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಲ್ಲ.ಮಾಸ್ಕ್ ಧರಿಸದವರಿಗೆ ಫೈನ್ ಹಾಕುವ ಸ್ಥಿತಿ ಸದ್ಯಕ್ಕೆ ಇಲ್ಲ. ಸಂಪೂರ್ಣ ಲಸಿಕಾಕರಣ ಆಗಬೇಕಿದೆ. ಲಸಿಕೆ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂಬುದು ನನ್ನ ಮನವಿ. ಸಮಕ್ಕೆ ಸರಿಯಾಗಿ ಲಸಿಕೆ ತೆಗೆದುಕೊಳ್ಳಿ ಲಸಿಕೆಯಿಂದ ವಂಚಿತರಾಗುವುದು ಬೇಡ. ಎಲ್ಲೂ ದೂರದಲ್ಲಿ ಕೋವಿಡ್ ಇದೆ ಎಂಬ ನಿರ್ಲಕ್ಷ್ಯ ಬೇಡ ಎಂದು ಕಿವಿಮಾತು ಹೇಳಿದರು.
ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಛತೀಸ್ ಘಡ್ ನ ಮಾಜಿ ಗೌರ್ನರ್ ಶೇಖರ್ ದತ್ ಸೇರಿದಂತೆ ಹಲವರು ಭಾಗಿಯಾಗಿದ್ದರು.