ಹೆಣ್ಣುಮಕ್ಕಳಿಗೆ ಮದುವೆ ನಿಶ್ಚಯವಾದ ದಿನದಿಂದ ಹೀಗೇ ರೆಡಿಯಾಗಬೇಕು ಎಂದು ತಯಾರಿ ನಡೆಸುತ್ತಿರುತ್ತಾರೆ. ಮದುವೆ ದಿನ ತಾವು ಸುಂದರವಾಗಿ ಕಾಣಬೇಕೆಂದು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ.
ಆದರೆ ಪ್ರತಿ ಮಹಿಳೆಯರಿಗೂ ಕಾಡೋ ಒಂದು ಚಿಂತೆಯೆಂದರೆ ಕೂದಲಿನ ಆರೈಕೆ. ಯಾವುದೇ ಕೆಮಿಕಲ್ ಗಳಿಲ್ಲದೆ ಕೂದಲನ್ನು ಆರೈಕೆ ಮಾಡಲು ಕೆಲವೊಂದು ಟಿಪ್ಸ್ ಫಾಲೋ ಮಾಡುವುದು ಉತ್ತಮ.
ಕಪ್ಪು ಕೂದಲಿಗೆ ದಾಸವಾಳದ ಬಳಕೆ
ದಾಸವಾಳದಲ್ಲಿ ಕೂದಲಿನ ಆರೋಗ್ಯಕ್ಕೆ ಪೂರಕವಾಗಿರುವ ಅಂಶಗಳಿವೆ. ದಾಸವಾಳದ ಎಲೆಗಳನ್ನು ಜಜ್ಜಿ ಅದಕ್ಕೆ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ ಮಿಕ್ಸ್ ಮಾಡಿ ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಬೇಕು. ಇದನ್ನು ನಿರಂತವಾಗಿ ಬಳಸುವುದರಿಂದ ಕೂದಲು ಕಪ್ಪಾಗಿ ಕಾಣುತ್ತದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದಲ್ಲದೆ ತಲೆಹೊಟ್ಟು ನಿವಾರಣೆ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಉದುರುವಿಕೆ ತಡೆಯಬಹುದು. ಕೂದಲು ಆರೋಗ್ಯವಾಗಿದ್ದರೆ ಮದುವೆಯಲ್ಲಿ ನೀವು ಬಯಸಿದಂತೆ ಕೂದಲಿನ ವಿನ್ಯಾಸ ಮಾಡಿಕೊಳ್ಳಬಹುದು.
ಒಣ ಕೂದಲಿರುವವರು ಈ ಟಿಪ್ಸ್ ಫಾಲೋ ಮಾಡಿ
ಅನೇಕ ಮಹಿಳೆಯರ ಸಮಸ್ಯೆ ಎಂದರೆ ಒಣ ಕೂದಲು. ಎಷ್ಟು ಬಾರಿ ಬಾಚಿದರೂ ಕೂದಲು ಹರಡಿಕೊಂಡು ಇರುತ್ತದೆ. ಕೂದಲು ಹೀಗೆ ಹರಡಿಕೊಂಡಿದ್ದರೆ ನಿದ್ದೆಯಿಂದ ಎದ್ದು ಬಂದ ಹಾಗೆ ಕಾಣುತ್ತದೆ. ಹೀಗಾಗಿ ಕೂದಲನ್ನು ಆರೈಕೆ ಮಾಡೋದು ತುಂಬಾ ಮುಖ್ಯವಾಗುತ್ತೆ. ಒಣ ಕೂದಲಿನವರು ವಾರಕ್ಕೆ ಎರಡು ಬಾರಿ ತಲೆ ಸ್ನಾನ ಮಾಡಬೇಕು. ಕೂದಲಿಗೆ ಸಾಧ್ಯವಾದಷ್ಟು ಎಣ್ಣೆ ಹಾಕಬೇಕು. ತಲೆಹೊಟ್ಟು ಸಮಸ್ಯೆ ಇರುವವರು ತಲೆಗೆ ಶಾಂಪೂ ಹಾಕಿದ ನಂತರ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ತಲೆಸ್ನಾನ ಮಾಡಿದರೆ ರೇಷ್ಮೆಯಂತ ಕೂದಲು ನಿಮ್ಮದಾಗುತ್ತದೆ.
ಚಹಾ ಪುಡಿ ಮತ್ತು ನಿಂಬೆ ನೀರನ್ನು ಬಳಸಿ ತಲೆಸ್ನಾನ ಮಾಡಿ
ಇನ್ನು ಕೆಲವರ ಕೂದಲು ಜಿಡ್ಡಿನಿಂದ ಕೂಡಿರುತ್ತದೆ. ಎಷ್ಟು ಬಾರಿ ಶಾಂಪೂ ಹಾಕಿ ಶುಚಿಗೊಳಿಸಿದರೂ ಹಾಗೆ ಇರುತ್ತದೆ. ಎಣ್ಣೆಯುಕ್ತ ಕೂದಲಿಗೆ, ಚಹಾ ಪುಡಿ ಮತ್ತು ನಿಂಬೆ ನೀರನ್ನು ಬಳಸಿ ತಲೆಸ್ನಾನ ಮಾಡಬೇಕು. ಅದು ಕೂದಲು ಹೊಳೆಯುವಂತೆ ಮಾಡುತ್ತದೆ. ಅದರಲ್ಲೂ ಗ್ರೀನ್ ಟೀ ಬ್ಯಾಗ್ ಗಳನ್ನು ತಣ್ಣೀರು ಅಥವಾ ಬಿಸಿನೀರಿನಲ್ಲಿ ನೆನೆಸಿ ನಿಂಬೆರಸವನ್ನು ಮಿಕ್ಸ್ ಮಾಡಿ ತಲೆಗೆ ಹಾಕುವುದರಿಂದ ಹೆಚ್ಚುವರಿ ಲಾಭ ಆಗುತ್ತದೆ.
ಕೂದಲಿನ ಪೋಷಣೆಗೆ ತೆಂಗಿನ ಹಾಲು
ಒಣ ಕೂದಲಿನ ಪೋಷಣೆಗಾಗಿ, ನೆತ್ತಿಗೆ ತೆಂಗಿನ ಹಾಲನ್ನು ಹಾಕಿ, ಅದನ್ನು 5 ನಿಮಿಷಗಳ ಕಾಲ ಬಿಟ್ಟು ನಂತರ ತಲೆಸ್ನಾನ ಮಾಡಬೇಕು. ಇದು ಕೂದಲನ್ನು ಪೋಷಿಸುತ್ತದೆ ಮತ್ತು ಮೃದುಗೊಳಿಸುತ್ತದೆ.