ಮನೆ ರಾಜ್ಯ ಬೆಳಗಾವಿಗೆ ಬಂತು ಬಾಲಕಿಯ ಹೃದಯ: ಕಸಿ ಶಸ್ತ್ರಚಿಕಿತ್ಸೆ ಆರಂಭ

ಬೆಳಗಾವಿಗೆ ಬಂತು ಬಾಲಕಿಯ ಹೃದಯ: ಕಸಿ ಶಸ್ತ್ರಚಿಕಿತ್ಸೆ ಆರಂಭ

0

ಬೆಳಗಾವಿ (Belgavi): ಮಿದುಳು ನಿಷ್ಕ್ರಿಯವಾದ 17 ವರ್ಷದ ಬಾಲಕಿಯ ಹೃದಯವನ್ನು ಧಾರವಾಡದಿಂದ ಬೆಳಗಾವಿಯ ಕೆಎಲ್ಇಎಸ್‌ ಆಸ್ಪತ್ರೆಗೆ ಸುರಕ್ಷಿತವಾಗಿ ತರಲಾಗಿದ್ದು, ಹೃದಯ ಕಸಿ ಶಸ್ತ್ರಚಿಕಿತ್ಸೆ ಆರಂಭವಾಗಿದೆ.

ಹೃದಯ ಕಸಿ ಮಾಡಲು ಸನ್ನದ್ಧರಾಗಿದ್ದ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ.ರಿಚರ್ಡ್‌ ಸಾಲ್ಡಾನಾ ಹಾಗೂ ಅವರ ತಂಡ ತಕ್ಷಣ ಕೆಲಸ ಆರಂಭಿಸಿತು.

ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ.ರಿಚರ್ಡ್‌ ಸಾಲ್ಡಾನಾ, ಡಾ.ಮೋಹನ ಗಾನ, ಡಾ.ಆನಂದ ವಾಘರಾಳಿ ಮತ್ತು ಅವರ ತಂಡವು ಶಸ್ತ್ರಚಿಕಿತ್ಸೆಯಲ್ಲಿ ನಿರತವಾಗಿದ್ದು, ಸತತ ಆರು ತಾಸುಗಳವರೆಗೆ ಈ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪೊಲೀಸ್‌ ಇಲಾಖೆಯ ನೆರವಿನೊಂದಿಗೆ ಝೀರೊ ಟ್ರಾಫಿಕ್‌ನಲ್ಲಿ (ಗ್ರೀನ್‌ ಕಾರಿಡಾರ್‌) ಬಾಲಕಿಯ ಹೃದಯನ್ನು ತರಲಾಯಿತು. ಎರಡು ಪೊಲೀಸ್‌ ಬೆಂಗಾವಲು ವಾಹನಗಳು ಆಂಬುಲೆನ್ಸ್‌ ಮುಂದೆ– ಹಿಂದೆ ಸಂಚರಿಸಿದವು. 90 ಕಿ.ಮೀ ದೂರವನ್ನು ವಿಶೇಷ ಆಂಬ್ಯುಲೆನ್ಸ್‌ ಮೂಲಕ ಕೇವಲ ಒಂದು ತಾಸಿನಲ್ಲಿ ಕ್ರಮಿಸಲಾಯಿತು.

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಲಕಿಯ ಮಿದುಳು ಸೋಮವಾರ ನಿಷ್ಕ್ರಿಯಗೊಂಡಿತು. ಹೃದಯ ಇನ್ನೂ ಬಡಿದುಕೊಳ್ಳುತ್ತಿತ್ತು. ಇದೇ ಕಾಲಕ್ಕೆ ಹೃದ್ರೋಗದಿಂದ ಬಳಲುತ್ತಿರುವ ಯುವಕ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದರು. ವಿಷಯ ತಿಳಿದ ಯುವತಿಯ ಪಾಲಕರು ಆಕೆಯ ಅಂಗಾಂಗ ದಾನ ಮಾಡಲು ಸಮ್ಮತಿಸಿದರು. ಅದರಂತೆ, ಪರಿಣತರ ತಂಡವು ಹೃದಯವನ್ನು ಜೋಪಾನವಾಗಿ ಆಸ್ಪತ್ರೆ ತಲುಪಿಸಿದೆ.

ಹಿಂದಿನ ಲೇಖನಜುಲೈ 21ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್‌
ಮುಂದಿನ ಲೇಖನಶಾಲಾ ಪಠ್ಯದಲ್ಲಿ ಭಗವದ್ಗೀತೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ನಿಂದ ನೋಟಿಸ್‌ ಜಾರಿ