ಮನೆ ರಾಜ್ಯ ಬಿಜೆಪಿಯಂತೆಯೇ ಪರಿಹಾರ ಕೊಡಿ, ಇಲ್ಲವಾದರೆ ಕುರ್ಚಿ ಬಿಡಿ: ಆರ್.ಅಶೋಕ್

ಬಿಜೆಪಿಯಂತೆಯೇ ಪರಿಹಾರ ಕೊಡಿ, ಇಲ್ಲವಾದರೆ ಕುರ್ಚಿ ಬಿಡಿ: ಆರ್.ಅಶೋಕ್

0

ದೊಡ್ಡಬಳ್ಳಾಪುರ:  ಹಿಂದಿನ ಬಿಜೆಪಿ ಸರ್ಕಾರ ಪ್ರವಾಹದ ಸಂದರ್ಭದಲ್ಲಿ ರೈತರಿಗೆ ದುಪ್ಪಟ್ಟು ಪರಿಹಾರವನ್ನು ನೀಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲಿ, ಇಲ್ಲವಾದರೆ ಕುರ್ಚಿ ಬಿಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ರೈತರಿಗೆ ಬರಗಾಲದ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಅಷ್ಟೇ ಮೊತ್ತವನ್ನು ಸಿಎಂ ಸಿದ್ದರಾಮಯ್ಯ ನೀಡಲಿ. ಕೇಂದ್ರ ಸರ್ಕಾರ 16 ರಾಜ್ಯಗಳಿಗೆ ಪರಿಹಾರ ಬಿಡುಗಡೆ ಮಾಡಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗುತ್ತದೆ‌. ಆದರೆ ಬಿಜೆಪಿ ರಾಜ್ಯ ಸರ್ಕಾರ ಅದಕ್ಕಾಗಿ ಕಾಯದೆ ಪರಿಹಾರ ವಿತರಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿ ಪಾಪರ್ ಆಗಿದೆ ಎಂದರು.

ಸಿದ್ದರಾಮಯ್ಯನವರು ರೈತರಿಗೆ ನಾಮ ಹಾಕುತ್ತಿದ್ದಾರೆ. ಎಣ್ಣೆ, ಮದ್ಯ, ಹಾಲು, ವಿದ್ಯುತ್ ಎಲ್ಲ ದರಗಳನ್ನು ಹೆಚ್ಚಳ ಮಾಡಿದ್ದಾರೆ. ಇವೆಲ್ಲವನ್ನೂ ಲೆಕ್ಕ ಹಾಕಿದರೆ ನಾಲ್ಕು ಸಾವಿರ ಹೆಚ್ಚಳವಾಗುತ್ತದೆ. ಹೀಗೆ ಜನರಿಂದಲೇ ಹಣ ಕಿತ್ತುಕೊಂಡು ಮರಳಿ ಗ್ಯಾರಂಟಿಗಳ ಮೂಲಕ ಹಣ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು 5 ಕೆಜಿ ಅಕ್ಕಿ ನೀಡಿದರೆ ಈ ಸರ್ಕಾರ ಅದನ್ನೂ ನೀಡುತ್ತಿಲ್ಲ. ಕಿಸಾನ್ ಸಮ್ಮಾನ್ ನೀಡಿದರೆ ಅದನ್ನೂ ಕಿತ್ತುಕೊಂಡರು ಎಂದು ದೂರಿದರು.

ರಾಷ್ಟ್ರಧ್ವಜ ಹಾರಿಸಿದ್ದು ನಾವು

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 25 ವರ್ಷಗಳ ಹಿಂದೆ ನಾನು ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು 5 ಸಾವಿರ ಪೊಲೀಸರನ್ನು ದಾಟಿ ರಾಷ್ಟ್ರಧ್ವಜ ಹಾರಿಸಿದ್ದೆವು. ನಾವೇ ನಿಜವಾದ ಭಾರತೀಯರು‌. ಈಗ ಕಾಂಗ್ರೆಸ್ ನಾಯಕರು ಒಂದು ಲಕ್ಷ ಧ್ವಜ ಹಾರಿಸುತ್ತೇವೆ ಎನ್ನುತ್ತಾರೆ‌, ಆದರೆ ಇವರಿಗೆ ಧ್ವಜಕ್ಕೆ ಒಂದು ಮೊಳ ಹೂ ಹಾಕುವ ಯೋಗ್ಯತೆಯೂ ಇಲ್ಲ ಎಂದರು.

ನಾನು ಕಂದಾಯ ಸಚಿವನಾಗಿದ್ದಾಗ ಮಾರ್ಗಸೂಚಿ ದರದಲ್ಲಿ ರಿಯಾಯಿತಿ ನೀಡಿದ್ದೆ. ಈಗಿನ ಸಚಿವರು 80 ರಿಂದ 250 ಶೇಕಡದಷ್ಟು ದರ ಜಾಸ್ತಿ ಮಾಡಿದ್ದಾರೆ. ಉಚಿತ ಬಸ್ ಪ್ರಯಾಣ ಎಂದು ಹೇಳಿ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಉಂಟಾಗಿದೆ. ಯಾರಿಗೂ ಪಿಂಚಣಿ ಸರಿಯಾಗಿ ದೊರೆಯುತ್ತಿಲ್ಲ. ಕಮಿಶನ್ ದಂಧೆಯೇ ಆರಂಭವಾಗಿದೆ ಎಂದು ದೂರಿದರು.

ರೈತರು ಹೊಲ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ. ಗೊಬ್ಬರ, ಬಿತ್ತನೆಯ ಖರ್ಚನ್ನು ಕೂಡ ಭರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಪರಿಹಾರದೊಂದಿಗೆ ಸಾಲಮನ್ನಾ ಕೂಡ ಮಾಡಲಿ ಎಂದು ಒತ್ತಾಯಿಸಿದರು.

ಲೂಟಿ ಸರ್ಕಾರ

ಕಾಂಗ್ರೆಸ್ ನ ಲೂಟಿಕೋರ ಸರ್ಕಾರ ಮುಲ್ಲಾಗಳಿಗೆ 10 ಸಾವಿರ ಕೋಟಿ ರೂ. ಘೋಷಿಸಿ 1 ಸಾವಿರ ಕೋಟಿ ರೂ. ನೀಡಿದೆ. ಅದೇ ರೈತರಿಗೆ ಬಿಡಿಗಾಸಿನ ಪರಿಹಾರ ಕೊಟ್ಟಿಲ್ಲ ಎಂದು ಆರ್.ಅಶೋಕ ದೂರಿದರು.