ಮಂಡ್ಯ: ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಯೋಜನೆಗಳನ್ನು ರೂಪಿಸಿ ಮಹತ್ತರವಾದ ಬದಲಾವಣೆ ತರುವುದರಿಂದ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು ಎಂದು ಆರ್ಥಿಕ ತಜ್ಞರು ಹಾಗೂ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರಾದ ಪ್ರೊ. ಎಂ. ಗೋವಿಂದರಾವ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಸಮಿತಿಯ ಸದಸ್ಯರು, ಜಿಲ್ಲೆಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಮಟ್ಟದ ಸಂವಾದ ಸಭೆ ನಡೆಸಿ ಮಾತನಾಡಿದರು. . ಸೇವಾ ವಲಯದಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ ಆದರೆ ಮುಖ್ಯವಾಗಿ ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ವಲಯದಲ್ಲಿ ಅಭಿವೃದ್ಧಿಯ ಸೂಚ್ಯಾಂಕ ಕಡಿಮೆ ಇದೆ. ಈ ವಲಯಗಳನ್ನು ಅಭಿವೃದ್ಧಿ ಗೊಳಿಸಲು ಉತ್ತಮ ಯೋಜನೆ ಹಾಗೂ ಸಲಹೆಗಳು ಬೇಕಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ರೈತರು ಕಬ್ಬು ಮತ್ತು ಭತ್ತದ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ. ಒಂದೇ ರೀತಿಯ ಬೆಳೆಯನ್ನು ಹೆಚ್ಚು ಬೆಳೆಯುವುದರಿಂದ ಮಣ್ಣಿನ ಪೋಷಕಾಂಶ ಕಡಿಮೆಯಾಗುತ್ತದೆ. ರೈತರಿಗೆ ವಿವಿಧ ಬೆಳೆಗಳನ್ನು ಬೆಳೆಯುವ ಬಗ್ಗೆ ಹಾಗೂ ಮಾರುಕಟ್ಟೆಯನ್ನು ಕಲ್ಪಿಸಿಕೊಡುವ ಬಗ್ಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ನೀಡುವ ಸಲಹೆಗಳನ್ನು ರೈತರು ಅಳವಡಿಸಿಕೊಳ್ಳುವ ಬಗ್ಗೆ ಪ್ರೇರಿಪಿಸಬೇಕು, ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆಗಳನ್ನು ತರುವ ಬಗ್ಗೆ ಚಿಂತಿಸಬೇಕು ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತ ಡಾ. ಡಿ.ಎಂ. ನಂಜುಂಡಪ್ಪ ಅಧ್ಯಕ್ಷತೆಯ ಸಮಿತಿಯು ೨೦೦೨ರಲ್ಲಿ ವರದಿ ನೀಡಿದ ನಂತರ ಹಿಂದುಳಿದ ತಾಲೂಕುಗಳು ಯಾವ ರೀತಿ ಬೆಳವಣಿಗೆಯಾಗಿದೆ, ಯಾವ ತಾಲೂಕುಗಳು ಇನ್ನೂ ಹಿಂದುಳಿದ ಪ್ರದೇಶಗಳಾಗಿ ಮುಂದುವರೆದಿವೆ ಎಂಬುದನ್ನು ಸಮಿತಿ ಪರಾಮರ್ಶಿಸಲಿದೆ ಎಂದರು.
ಅಭಿವೃದ್ಧಿಯನ್ನು ಸೂಚ್ಯಂಕದ ಅಧಾರದ ಮೇಲೆ ನೋಡಲಾಗುತ್ತದೆ. ಹಿಂದುಳಿದಿದ್ದಲ್ಲಿ ಯಾವ ಕಾರಣಕ್ಕಾಗಿ ಯಾವ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಎಂಬುದನ್ನು ಸಮಿತಿಯು ಪರಾಮರ್ಶಿಸಲಿದೆ. ತಲಾ ಆದಾಯ, ಶಿಕ್ಷಣ, ಆರೋಗ್ಯ, ಇನ್ನಿತರ ಕ್ಷೇತ್ರಗಳಲ್ಲಿನ ಸುಧಾರಣೆ, ಬೆಳವಣಿಗೆಯ ಬಗ್ಗೆಯು ಸಮಿತಿಯು ಪರಿಶೀಲಿಸಲಿದೆ. ಎಲ್ಲ ಅಂಶಗಳನ್ನು ಗಮನಿಸಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಆರ್. ವಿಶಾಲ್ ಅವರು ಮಾತನಾಡಿ ಮಂಡ್ಯ ಜಿಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯಗಳು ಬೇಕಿದೆ ಮೊದಲಿಗೆ ಸೂಪರ್ ಸ್ಪ್ಯಾಷಲಿಟಿ ಹಾಸ್ಪಿಟಲ್, ಟ್ರಮಾ ಸೆಂಟರ್, ನೆಫ್ರೋ ಮತ್ತು ನ್ಯೂರೋ ತಜ್ಞರ ಅವಶ್ಯಕತೆ ಕುರಿತು ಸಭೆಯಲ್ಲಿ ಚರ್ಚಿಸಿ ಆರೋಗ್ಯ ಕ್ಷೇತ್ರದ ಅವಶ್ಯಕತೆ ಕುರತು ವರದಿ ಸಲ್ಲಿಸುವುದಾಗಿ ತಿಳಿಸಿದರು.
ಗುಣಮಟ್ಟದ ಶಿಕ್ಷಣ ತಳಹಂತದಿಂದಲೇ ಪ್ರಾರಂಭವಾಗಬೇಕು ವಿದ್ಯಾರ್ಥಿಗಳಿಗೆ ಐದು ಮತ್ತು ಒಂಭತ್ತನೆಯ ತರಗತಿಗಳಲ್ಲಿ ವಿಶೇಷ ಪರೀಕ್ಷೆ ನಡೆಸಿ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ. ಶಿಕ್ಷಕರಿಗೆ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಿ ಇದರಿಂದ ಹತ್ತನೇ ತರಗತಿಯ ಫಲಿತಾಂಶ ಉತ್ತಮಗೊಳ್ಳಲಿದೆ ಎಂದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಾಸ್ಟಲ್ ಹಾಗೂ ಕಾಲೇಜುಗಳು ತಾಲ್ಲೂಕು ಮಟ್ಟದಲ್ಲಿ ಹೆಚ್ಚಾಗಬೇಕು ಇದರಿಂದ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಕಡಿಮೆಯಾಗುತ್ತದೆ ಎಂದರು.
ಕಾಳುಗಳು, ಸಿರಿಧಾನ್ಯ ಬೆಳೆಗಳನ್ನು ಬೆಳೆಯುವುದು ಹಾಗೂ ಸಿರಿಧಾನ್ಯದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಮಾರುಕಟ್ಟೆ ಕಲ್ಪಿಸುವುದರಿಂದ ಬದಲಾವಣೆಗಳನ್ನು ತರಬಹುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಮಾತನಾಡಿ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಂಡು ಅಣಬೆ ಬೇಸಾಯ ಮಾಡಿಸಿ ಅವರಿಗೆ ಮಾರುಕಟ್ಟೆ ಕಲ್ಪಿಸಿ ಕೊಡುವುದು. ತೋಟಗಾರಿಕೆ ಇಲಾಖೆ ವತಿಯಿಂದ ಡ್ರಗನ್ ಫ್ರೂಟ್ ಸೇರಿದಂತೆ ಹೊಸ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದರು.
ಕೆ.ಆರ್.ಎಸ್ ಹಿನ್ನೀರಿನಲ್ಲಿ ಸಹಾಸ ಕ್ರೀಡೆಗಳನ್ನು ಹೆಚ್ಚು ಪ್ರಚಲಿತ ಮಾಡುವುದರಿಂದ ಉದ್ಯೋಗಗಳನ್ನು ಕಲ್ಪಿಸಬಹುದು. ಇದರೊಂದಿಗೆ ವಿಲೇಜ್ ಸ್ಟೇ ಎಂಬ ವಿಷಯದೊಂದಿಗೆ ನಗರ ಪ್ರದೇಶದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದರು.
ಸಭೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ಪ್ರಭಾಕರ್ ಅವರುಗಳು ಸಂವಾದದಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರಾದ ಸೂರ್ಯ ನಾರಾಯಣ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.














