ಮನೆ ಸುದ್ದಿ ಜಾಲ ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಿ: ಮೇಯರ್ ಶಿವಕುಮಾರ್

ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಿ: ಮೇಯರ್ ಶಿವಕುಮಾರ್

0

ಮೈಸೂರು(Mysuru): ಉತ್ತಮ ಆರೋಗ್ಯಕ್ಕೆ ಯೋಗದ ಜೊತೆ ಪೌಷ್ಟಿಕಾಂಶವುಳ್ಳ ಆಹಾರ ಪದ್ಧತಿಯು ಮುಖ್ಯ ಆದ್ದರಿಂದ ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಿ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು ತಿಳಿಸಿದರು.

ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಸಕ್ರಿಯವಾದ ಭಾರತ ನಿರ್ಮಾಣಕ್ಕೆ ಈ ರೀತಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂರ್ಣಿಮಾ ರವರು ಮಾತನಾಡಿ 2023 ನೇ ವರ್ಷವನ್ನು ಅಂತರ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ವಿಶ್ವ ಸಂಸ್ಥೆಯು ಘೋಷಣೆ ಮಾಡಿರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಸಿರಿಧಾನ್ಯಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಸಿರಿಧಾನ್ಯಗಳ ನಡಿಗೆ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ. 50 ವರ್ಷಗಳ ಹಿಂದೆ ಸಿರಿಧಾನ್ಯಗಳೇ ಮುಖ್ಯ ಆಹಾರವಾಗಿತ್ತು. ಹೆಚ್ಚು ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯವಾಗಿರಬಹುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ರೂಪ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಿಂದ ಹಲವಾರು ಖಾಯಿಲೆಗಳು ಬರುವ ಸಾಧ್ಯತೆಗಳಿವೆ ಆದ್ದರಿಂದ ನಮ್ಮ ಜೀವನ ಶೈಲಿಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಮುಖ್ಯವಾಗಿ ಜನರಲ್ಲಿ ಹೆಚ್ಚಾಗಿ ಸಿರಿಧಾನ್ಯಗಳ ಕುರಿತು ಜಾಗೃತಿಯನ್ನು ಮೂಡಿಸಬೇಕು ಎಂದರು.

ನಡಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ಡಿ. ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಅವರಣದಲ್ಲಿ ಸಂಪೂರ್ಣವಾಯಿತು. ನಡಿಗೆಯ ವೇಳೆ ಸಿರಿಧಾನ್ಯಗಳ ಮಹತ್ವವನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಾಗಲಾಯಿತು.

ನಡಿಗೆಯಲ್ಲಿ ಕೃಷಿ ಸಂಬoಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ ತಂತ್ರಜ್ಞರ ಸಂಸ್ಥೆಯ ಹಾಗೂ ಕೃಷಿ ಪರಿಕರ ಮಾರಾಟ ಸಂಘದ ಪದಾಧಿಕಾರಿಗಳು, ಎನ್. ಸಿ ಸಿ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.