ಮೈಸೂರು: ರಾಜ್ಯ ಹಾಗೂ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ರಚನೆಗೆ ಬಲ ತುಂಬಿ ಎಂದು ಶಾಸಕ ಎಸ್.ಎ.ರಾಮದಾಸ್ ಮನವಿ ಮಾಡಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರ ಬಡಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯ ಜನತಾ ಪಕ್ಷ ತತ್ವ ಹಾಗೂ ಸಿದ್ದಾಂತದ ಮೇಲೆ ನಿಂತಿದೆ. ಅದಕ್ಕೆ ಬುನಾದಿ ಹಾಕಿದವರು ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ ಅವರಂತಹ ಮೇರು ವ್ಯಕ್ತಿಗಳು. ಇಂದು ಅದೇ ಹಾದಿಯಲ್ಲಿ ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಗುತ್ತಿದ್ದಾರೆ. ಇದು ದೆಸದ ಹೆಮ್ಮೆ ಎಂದರು.
ರಾಜಕೀಯ ಚುಕ್ಕಾಣಿ ಹಿಡಿಯುವ ಸಲುವಾಗಿ ದೇಶದಲ್ಲಿ ಕೆಲ ಪಕ್ಷಗಳು ಇವೆ. ಆದರೆ, ಅವೆಲ್ಲವುಗಳಿಗಿಂತ ಭಿನ್ನವಾಗಿ ಹಾಗೂ ಸಿದ್ದಾಂತದಡಿ ಕಾರ್ಯ ರೂಪಿಸುತ್ತಿರುವುದು ಬಿಜೆಪಿ ಮಾತ್ರ. ಸಂಸ್ಥಾಪನಾ ದಿನದ ಈ ಸಂದರ್ಭದಲ್ಲಿ ಬಿಜೆಪಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ದೇಶದ ರಕ್ಷಣೆಗಾಗಿ ಇಂದು ಅನೇಕರು ಪ್ರಾಣ ಕಳೆದುಕೊಂಡ ಇತಿಹಾಸ ನಮ್ಮ ಕಣ್ಣಮುಂದೆ ಇದೆ. ಅವರೆಲ್ಲರಿಗಾಗಿ ನಾವು ದೇಶ ಕಟ್ಟುವ ಕೆಲಸ ಮಾಡೋಣ ಎಂದ ಅವರು, ಬಿಜೆಪಿ ಇರುವುದೇ ಆ ಕಾರ್ಯ ಮಾಡಲಿಕ್ಕಾಗಿ ಎಂದು ಹೇಳಿದರು.
ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಂದು ದೇಶವೇ ತಲೆದೂಗಿದೆ. ಮಾತ್ರವಲ್ಲ, ನಮ್ಮ ನೆರೆಯ ಶತ್ರು ರಾಷ್ಟ್ರವೂ ಕೂಡ ನಮ್ಮ ಪ್ರಧಾನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ. ಇದ್ದರೆ ನರೇಂದ್ರ ಮೋದಿಯಂತಹ ಪ್ರಧಾನಮಂತ್ರಿ ಇರಬೇಕು ಎಂದು ಆಶಿಸುತ್ತಿದೆ. ಅದಕ್ಕಾಗಿ ನಾವು ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಬರುವಂತೆ ನೋಡಿಕೊಳ್ಳಬೇಕಿದೆ ಎಂದರು.
ಇಂದಿನಿಂದ ಒಂದು ತಿಂಗಳ ಕಾಲ ನಮ್ಮ ಬೂತ್ ಅಧ್ಯಕ್ಷರು , ಕಾರ್ಯದರ್ಶಿಗಳು ಹಾಗೂ ಪ್ರಮುಖರು ಮನೆ ಮನೆಗೆ ಹೋಗುವ ಕೆಲಸ ಮಾಡಲಿದ್ದಾರೆ. ಪಕ್ಷ ಹಾಗೂ ಸರ್ಕಾರದ ಸಾಧನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದ್ದಾರೆ. ಓಟು ನಿಮ್ಮದೇ, ನೋಟು ನಿಮ್ಮದೇ ಎಂದು ಹೇಳುವ ಮೂಲಕ ಮಾದರಿ ಕ್ಷೇತ್ರದ ನಿರ್ಮಾಣ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದರು.