ಮನೆ ರಾಜ್ಯ 54 ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆದ ಗೋ ಫಸ್ಟ್ ವಿಮಾನ: ಪ್ರಯಾಣಿಕರ ಆಕ್ರೋಶ

54 ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆದ ಗೋ ಫಸ್ಟ್ ವಿಮಾನ: ಪ್ರಯಾಣಿಕರ ಆಕ್ರೋಶ

0

ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ‌‌‌ ದೆಹಲಿಗೆ ಹೊರಟ್ಟಿದ್ದ ಗೋ ಫಸ್ಟ್ ವಿಮಾನವೂ ಸೋಮವಾರ ಮುಂಜಾನೆ 54 ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆಗಿದೆ.

ವೇಳಾಪಟ್ಟಿಯಂತೆ G8 116 ವಿಮಾನವೂ ಬೆಳಿಗ್ಗೆ 6.45ಕ್ಕೆ ಬೆಂಗಳೂರಿನಿಂದ ದೆಹಲಿಗೆ ಹೊರಡುವುದಿತ್ತು. ಟಿಕೆಟ್ ಕಾಯ್ದಿರಿಸಿದ್ದ 54 ಪ್ರಯಾಣಿಕರು ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಬಂದು, ಅಗತ್ಯ ಪರಿಶೀಲನೆ ಪ್ರಕ್ರಿಯೆಗೆ ಅಣಿಯಾಗಿ ಟರ್ಮಿನಲ್ ನಿಂದ ವಿಮಾನ ಇರುವ ಜಾಗಕ್ಕೆ ತೆರಳಲು ಶೆಟಲ್ ಬಸ್ ಹತ್ತಿದ್ದರು. ಪ್ರಯಾಣಿಕರು ಶೆಟಲ್ ಬಸ್‌’ನ ಮೂಲಕ ವಿಮಾನ ಹತ್ತಿರ ತೆರಳುವಾಗಲೇ ವಿಮಾನ ಟೇಕ್ ಆಫ್ ಆಗಿದೆ.

ಇದರಿಂದ ಆಕ್ರೋಶಗೊಂಡ ಸಾಕಷ್ಟು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಮಾನ ನಿಯಂತ್ರಣ ಪ್ರಾಧಿಕಾರ‌‌ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ ಕಚೇರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಪ್ರಯಾಣಿಕ ಸತೀಶ್ ಕುಮಾರ್ ಎಂಬುವವರು, ಒಂದು ಶೆಟಲ್‌ ಬಸ್ ನಲ್ಲಿದ್ದ 50 ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದೆ. ಅವರೇನೂ ನಿದ್ರಾವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಾ, ಕೊನೆ ಕ್ಷಣದ ಪರಿಶೀಲನೆ ಎಂಬುದು ಇರುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಶ್ರೇಯಾ ಸಿನ್ಹಾ ಎಂಬ ಪ್ರಯಾಣಿಕರು ನೇರವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಲಾಯಕ್ಕೆ (DGCA), ಮುಂಜಾನೆ 6.30ರ ಫ್ಲೈಟ್ ಗೆ ಬೆಳಿಗ್ಗೆ 5.30ಕ್ಕೆ ಶೆಟಲ್ ಬಸ್ ನಲ್ಲಿದ್ದೆವು. ಹಿಗಿದ್ದರೂ 50 ಪ್ರಯಾಣಿಕರನ್ನು ಬಿಟ್ಟು ಯಾಕೆ ವಿಮಾನ ಟೇಕ್ ಆಫ್ ಆಗಿದೆ? ನಾವು ಕಾಯ್ದಿರಿಸಿದ್ದು ವಿಮಾನದ ಟಿಕೆಟ್ ಹೊರತು ಶೆಟಲ್ ಬಸ್ ನದ್ದಲ್ಲಎಂದು ಟ್ವೀಟಿಸಿದ್ದಾರೆ.

ಘಟನೆಯ ಕುರಿತು ಗೋ ಫಸ್ಟ್ ವಿಮಾನ ಸಂಸ್ಥೆಯವರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಟ್ವಿಟರ್’ನಲ್ಲಿ ಪ್ರಮಾದಕ್ಕೆ‌ ವಿಷಾದಿಸುತ್ತೇವೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸಾರ್ವಜನಿಕ ವಿಮಾನಯಾನ ಮಹಾ ನಿರ್ದೇಶನಲಾಯ (DGCA) ಘಟನೆ ಬಗ್ಗೆ ವರದಿ ನೀಡುವಂತೆ‌ ತಾಕೀತು ಮಾಡಿದೆ.