ಮಂಗಳೂರು: ಬೆಂಗಳೂರು-ಮಂಗಳೂರು ರೈಲಿನ ಎಸಿ ಕೋಚ್ ನಲ್ಲಿ 3.91 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಪ್ರಕರಣ ವರದಿಯಾಗಿದೆ.
ನಗರದ ಜಪ್ಪುವಿನ 74 ವರ್ಷದ ವೃದ್ಧೆ, ಆಕೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಎ. 7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಹೊರಟು ಮರುದಿನ ಬೆಳಗ್ಗೆ ಮನೆಗೆ ತಲುಪಿದಾಗ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟಿದ್ದ ಎರಡು ಬಳೆಗಳು, ಸರ ಸೇರಿದಂತೆ ಒಟ್ಟು 59.885 ಗ್ರಾಂ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.
ವೃದ್ಧೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ರಾತ್ರಿ 11.30ಕ್ಕೆ ಮಲಗಿದ್ದರು. ವೃದ್ಧೆ ಎಚ್ಚರವಾಗಿದ್ದರು. ರೈಲು ಮೈಸೂರು ಬಿಟ್ಟ ಬಳಿಕ ಓರ್ವ ಪ್ರಯಾಣಿಕ ಅವರ ಪಕ್ಕದ ಸೀಟಿನಲ್ಲಿ ಬಂದು ಕುಳಿತಿದ್ದ. ಆತನ ಟಿಕೆಟ್ ಅನ್ನು ಟಿಟಿಇ ಪರಿಶೀಲಿಸಿ ಹೋಗಿದ್ದ. ಆ ವ್ಯಕ್ತಿ ಮಲಗದೆ ಲಗೇಜ್ ಗಳನ್ನೇ ನೋಡುತ್ತಿದ್ದ. ಮೊಮ್ಮಕ್ಕಳ ಬ್ಯಾಗ್ ಗಳನ್ನು ಕೂಡ ಮುಟ್ಟಿ ನೋಡುತ್ತಿದ್ದ. ಪ್ರಶ್ನಿಸಿದಾಗ ಸುಬ್ರಹ್ಮಣ್ಯದಲ್ಲಿ ಇಳಿಯುವುದಾಗಿ ಹೇಳಿದ್ದ. ಅನಂತರ ವೃದ್ಧೆಗೆ ನಿದ್ದೆ ಬಂದಿತ್ತು ಎಂದು ರೈಲ್ವೇ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖೀಸಲಾಗಿದೆ.