ಮನೆ ಅಪರಾಧ ಚಿನ್ನ ಕಳ್ಳ ಸಾಗಣೆ ಪ್ರಕರಣ: ರನ್ಯಾ ರಾವ್, ತರುಣ್ ರಾಜು ಜಾಮೀನು ಅರ್ಜಿ ವಿಚಾರಣೆ ಪೂರ್ಣ...

ಚಿನ್ನ ಕಳ್ಳ ಸಾಗಣೆ ಪ್ರಕರಣ: ರನ್ಯಾ ರಾವ್, ತರುಣ್ ರಾಜು ಜಾಮೀನು ಅರ್ಜಿ ವಿಚಾರಣೆ ಪೂರ್ಣ : ತೀರ್ಪು ಕಾಯ್ದಿರಿಕೆ

0

ಬೆಂಗಳೂರು: ಹೈಪ್ರೊಫೈಲ್ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಮತ್ತು ಉದ್ಯಮಿ ತರುಣ್ ರಾಜು ಅವರ ಜಾಮೀನು ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠ ತೀರ್ಪು ಕಾಯ್ದಿರಿಸಿದೆ.

ರನ್ಯಾ ರಾವ್ ಪರ ವಕೀಲರು, ಡಿಆರ್ಐ ಅಧಿಕಾರಿಗಳು ನಿಯಮ ಉಲ್ಲಂಘನೆ ಮೂಲಕ ಮನೆಯಲ್ಲಿ ಹಾಗೂ ವಿಮಾನ ನಿಲ್ದಾಣದಲ್ಲಿ ಶೋಧ ನಡೆಸಿದ್ದು, ಯಾವುದೇ ನಿಗದಿತ ದಾಖಲೆ ಇಲ್ಲದೆಯೇ ಚಿನ್ನ ಹಾಗೂ ನಗದು ಜಪ್ತಿ ಮಾಡಲಾಗಿದೆ ಎಂದು ಆಕ್ಷೇಪಿಸಿದರು. ಅಲ್ಲದೆ, 46 ದಿನಗಳಿಂದ ಜೈಲಿನಲ್ಲಿ ಬಂಧನದಲ್ಲಿರುವ ರನ್ಯಾ ತನಿಖೆಗೆ ಸಹಕರಿಸುತ್ತಿದ್ದಾರೆಯೆಂದು ಹೇಳಿದ್ದಾರೆ.

ತರುಣ್ ರಾಜು ಪರ ವಕೀಲರು, ಅವರಿಗೆ ನೇರವಾಗಿ ಯಾವುದೇ ಪ್ರತ್ಯೇಕ ಆರೋಪವಿಲ್ಲ, ಅವರು ರನ್ಯಾ ಜೊತೆಗೂಡಿ ಕಂಪನಿಯಲ್ಲಿ ಪಾಲುದಾರರಾಗಿರುವ ಕಾರಣ ಈ ಪ್ರಕರಣಕ್ಕೆ ಎಳೆಯಲಾಗಿದೆ ಎಂದು ವಾದಿಸಿದರು. ತರುಣ್ ಅಮೆರಿಕ ಪ್ರಜೆಗಳಾಗಿದ್ದು, ಚಿನ್ನವನ್ನು ದುಬೈನಲ್ಲಿ ಖರೀದಿ ಮಾಡಿ ಬೇರೊಂದು ದೇಶಕ್ಕೆ ಕಳುಹಿಸುವ ಉದ್ದೇಶ ಹೊಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಇತ್ತ, ಡಿಆರ್ಐ ಪರ ವಕೀಲರು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಎಂಬ ಕಾರಣದಿಂದ ಜಾಮೀನು ನೀಡದಂತೆ ಕೋರಿದ್ದಾರೆ. ಇಬ್ಬರೂ 31 ಬಾರಿ ದುಬೈಗೆ ಪ್ರಯಾಣ ಮಾಡಿರುವ ದಾಖಲೆಗಳು ಇದ್ದು, ಈ ಪ್ರಕರಣದಲ್ಲಿ ಗಂಭೀರ ಅಂಶಗಳು ಒಳಗೊಂಡಿರುವುದಾಗಿ ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಮುಂದಿನ ಕೆಲವು ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ಚಿತ್ರರಂಗದಿಂದ ಉದ್ಯಮವಲಯದವರೆಗೂ ಕುತೂಹಲ ಕೆರಳಿಸಿರುವ ಈ ಪ್ರಕರಣದ ಮುಂದಿನ ಬೆಳವಣಿಗೆಗಳಿಗೆ ಉತ್ಸುಕತೆಯಿಂದ ನಿರೀಕ್ಷಿಸಲಾಗುತ್ತಿದೆ.