ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ 120 ಅಡಿ ಮೀರಿದೆ.
ಕೃಷ್ಣ ರಾಜ ಸಾಗರ ಜಲಾಶಯ ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿದ್ದು ಪ್ರಸ್ತುತ ಜಲಾಶಯಕ್ಕೆ 13,856 ಕ್ಯೂಸೆಕ್ ಒಳಹರಿವು ಇದೆ. ಹೀಗಾಗಿ ಸದ್ಯದಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.ಇನ್ನು ಹಾರಂಗಿ ಜಲಾಶಯ ಶೇ.74 ಭರ್ತಿಯಾಗಿದ್ದು, ಹೇಮಾವತಿ ಜಲಾಶಯ ಶೇ.83 ಹಾಗೂ ಕಬಿನಿ ಜಲಾಶಯ ಶೇ.81ರಷ್ಟು ಭರ್ತಿಯಾಗಿದೆ.
ಇನ್ನು ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಡ್ಯಾಂ, ವರಾಹಿ, ಸೂಫ ಜಲಾಶಯಗಳಿಗೂ ಒಳಹರಿವು ಹೆಚ್ಚಾಗಿದೆ.ಉತ್ತರ ಕರ್ನಾಟಕ ಭಾಗದ ಭದ್ರ, ತುಂಗಭದ್ರ, ಘಟಪ್ರಭ,ಹಾಲಮಟ್ಟಿ, ನಾರಾಯಣಪುರ ಜಲಾಶಯಗಳಿಗೂ ಒಳಹರಿವು ಹೆಚ್ಚಾಗಿದೆ. ಇನ್ನುಳಿದಂತೆ ಆಲಮಟ್ಟಿ ಜಲಾಶಯ ಶೇ.61ರಷ್ಟು, ನಾರಾಯಣಪುರ ಜಲಾಶಯ ಶೇ.78ರಷ್ಟು ಭರ್ತಿಯಾಗಿವೆ.














