ಕನ್ನಡದಲ್ಲಿ “ಕಲಾಕಾರ್’, “ಗನ್’, “ಶ್ರೀಸತ್ಯನಾರಾಯಣ’, “ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ನಟ ಕಂ ನಿರ್ದೇಶಕ ಹರೀಶ್ ರಾಜ್ ಈ ಬಾರಿ “ಪ್ರೇತ’ ಎಂಬ ಹಾರರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಇತ್ತೀಚೆಗಷ್ಟೇ ಹರೀಶ್ ರಾಜ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ “ಪ್ರೇತ’ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಸುಮಾರು 3 ವರ್ಷದ ಗ್ಯಾಪ್ ಬಳಿಕ ಮತ್ತೆ ನಿರ್ದೇಶನದತ್ತ ಮರಳಿರುವ ಹರೀಶ್ ರಾಜ್ “ಪ್ರೇತ’ ಸಿನಿಮಾದ ಮೂಲಕ ಥಿಯೇಟರಿನಲ್ಲಿ ನೋಡುಗರನ್ನು ಬೆಚ್ಚಿಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ “ಪ್ರೇತ’ ಸಿನಿಮಾ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, “ಪ್ರೇತ’ ಹರೀಶ್ ರಾಜ್ ಮತ್ತು ಚಿತ್ರತಂಡದ ಮುಖದಲ್ಲಿ ನಗುವಿನ ಗೆರೆ ಮೂಡಿಸಲು ಯಶಸ್ವಿಯಾಗಿದೆ.
ಇದೇ ವೇಳೆ “ಪ್ರೇತ’ದ ಬಗ್ಗೆ ಮಾತನಾಡಿರುವ ಹರೀಶ್ ರಾಜ್, ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ಸಿನಿಮಾದ ಟೈಟಲ್ ಹೇಳುವಂತೆ “ಪ್ರೇತ’
ಹಾರರ್-ಥ್ರಿಲ್ಲರ್ ಸಿನಿಮಾ. ಇಲ್ಲಿಯವರೆಗೆ ನಾನು ಮಾಡಿರುವ ಸಿನಿಮಾಗಳಿಗಿಂತ ತುಂಬ ವಿಭಿನ್ನ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಈ ಥರದ ಹಾರರ್-ಥ್ರಿಲ್ಲರ್ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿ ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಕನ್ನಡದ ಜೊತೆಗೆ ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲೂ “ಪ್ರೇತ’ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬಂದಿದೆ. ಸಾಕಷ್ಟು ಸಿನಿಮಾಗಳ ಪೈಪೋಟಿ ಮತ್ತು ಥಿಯೇಟರ್ ಲಭ್ಯತೆಯಿಲ್ಲದ ಕಾರಣ “ಪ್ರೇತ’ ಸಿನಿಮಾವನ್ನು ಕಡಿಮೆ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ನಾವು ಬಿಡುಗಡೆ ಮಾಡಿರುವ ಬಹುತೇಕ ಎಲ್ಲ ಕೇಂದ್ರಗಳಲ್ಲಿ “ಪ್ರೇತ’ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗುತ್ತಿದೆ’ ಎಂಬುದು ಹರೀಶ್ ರಾಜ್ ಮಾತು.
“ಮಾಸ್ ಮತ್ತು ಕ್ಲಾಸ್ ಆಡಿಯನ್ಸ್‌ಗೆ “ಪ್ರೇತ’ ಇಷ್ಟವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿ ಸುತ್ತಿದ್ದಾರೆ. ಮೊದಲ ಬಾರಿಗೆ ಈ ಥರದ ಸಿನಿಮಾ ಮಾಡಿರುವುದಕ್ಕೆ ಖುಷಿಯಿದೆ. ದಿನದಿಂದ ದಿನಕ್ಕೆ “ಪ್ರೇತ’ ಸಿನಿಮಾ ನೋಡುತ್ತಿರುವ ಆಡಿಯನ್ಸ್ ಮತ್ತು ಕಲೆಕ್ಷನ್ ಎರಡೂ ಹೆಚ್ಚಾಗುತ್ತಿದ್ದು, ಮುಂದಿನ ವಾರದಿಂದ ರಾಜ್ಯಾದ್ಯಂತ ಇನ್ನಷ್ಟು ಕೇಂದ್ರಗಳಲ್ಲಿ “ಪ್ರೇತ’ ಸಿನಿಮಾ ರಿಲೀಸ್ ಮಾಡುವ ಯೋಜನೆಯಿದೆ’ ಎಂಬುದು ಹರೀಶ್ ರಾಜ್ ಮಾತು.
“ಪ್ರೇತ’ ಸಿನಿಮಾದಲ್ಲಿ ಅಹಿರಾ ಶೆಟ್ಟಿ ನಾಯಕಿಯಾಗಿಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮೊದಲ ಹಾರರ್-ಥ್ರಿಲ್ಲರ್ ಸಿನಿಮಾಕ್ಕೆ ಆಡಿಯನ್ಸ್ ಕಡೆಯಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಅಹಿರಾ ಕೂಡ ಫುಲ್ ಖುಷಿಯಾಗಿದ್ದಾರೆ. ಉಳಿದಂತೆ ಅಮೂಲ್ಯ ಭಾರದ್ವಾಜ್, ಬಿ. ಎಂ. ವೆಂಕಟೇಶ್, ಅಮಿತ್ “ಪ್ರೇತ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ ಸಂಯೋಜನೆ ಯಿದೆ. ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನವಿದೆ. ಸಿನಿಮಾಕ್ಕೆ ಪ್ರಮೋದ್ ಮರವಂತೆ ಸಾಹಿತ್ಯ, ಕಿರಣ್ ಆರ್. ಹೆಮ್ಮಿಗೆ ಸಂಭಾಷಣೆ ಬರೆದಿದ್ದಾರೆ. ಒಟ್ಟಾರೆ “ಪ್ರೇತ’ ಚಿತ್ರತಂಡದ ಮಂದಹಾಸಕ್ಕೆ ಕಾರಣವಾಗಿದ್ದು, ಮುಂದೆ ಸಿನಮಾ ಇನ್ನಷ್ಟು ಗೆಲುವು ತಂದುಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.