ನವದೆಹಲಿ; ಪ್ರತಿಷ್ಠಿತ ಗೂಗಲ್ ಕಂಪನಿಯು ತನ್ನ ಆಡಳಿತಾತ್ಮಕ ಉನ್ನತ ಹುದ್ದೆಯಲ್ಲಿನ ಶೇ.10ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಈ ವಿಷಯವನ್ನು ಘೋಷಿಸಿರುವುದಾಗಿ ಬ್ಯುಸಿನೆಸ್ ಇನ್ ಸೈಡರ್ ವರದಿ ಮಾಡಿದೆ. ಗೂಗಲ್ ಸಂಸ್ಥೆಯ ದಕ್ಷತೆ, ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಸೇರಿದಂತೆ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಪಿಚೈ ಸಭೆಯಲ್ಲಿ ವಿವರಿಸಿರುವುದಾಗಿ ವರದಿ ತಿಳಿಸಿದೆ.
ಗೂಗಲ್ ಕಂಪನಿಯ ಮ್ಯಾನೇಜರ್ ಗಳು, ನಿರ್ದೇಶಕರು ಮತ್ತು ಉಪಾಧ್ಯಕ್ಷರ ಹುದ್ದೆಯನ್ನು ಹೊಂದಿರುವವರ ಮೇಲೆ ಉದ್ಯೋಗ ಕಡಿತದ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.
ಕೆಲವು ಆಡಳಿತಾತ್ಮಕ ಹುದ್ದೆಗಳನ್ನು ಪರಿವರ್ತಿಸಲಾಗಿದೆ. ಅಲ್ಲದೇ ಆಡಳಿತಾತ್ಮಕವಲ್ಲದ ಇತರ ಹುದ್ದೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಗೂಗಲ್ ವಕ್ತಾರರು ಬಹಿರಂಗಪಡಿಸಿದ್ದಾರೆ. ಇದು ಗೂಗಲ್ ಸಂಸ್ಥೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುವ ಪ್ರಕ್ರಿಯೆಯ ಭಾಗವಾಗಿದೆ. 2020ರ ಸೆಪ್ಟೆಂಬರ್ ನಲ್ಲಿ ಸಿಇಒ ಸುಂದರ್ ಪಿಚೈ ಅವರು ಕಂಪನಿಯ ದಕ್ಷತೆಯನ್ನು ಶೇ.20ರಷ್ಟು ಹೆಚ್ಚಿಸುವ ಗುರಿಯನ್ನು ಘೋಷಿಸಿದ್ದ ವೇಳೆ ಉದ್ಯೋಗ ಕಡಿತದ ಸೂಚನೆ ನೀಡಲಾಗಿತ್ತು ಎಂದು ವರದಿ ವಿವರಿಸಿದೆ.
ಗೂಗಲ್ ಕಂಪನಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಗಮನ ಹರಿಸಿತ್ತು. 2023ರ ಜನವರಿ ನಂತರ ಗೂಗಲ್ ಕಂಪನಿ ಬರೋಬ್ಬರಿ 12,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕೃತಕ ಬುದ್ದಿಮತ್ತೆಯ ತೀವ್ರ ಸ್ಪರ್ಧೆಯ ಪರಿಣಾಮ ಗೂಗಲ್ ತನ್ನ ಕಾರ್ಯಕ್ಷಮತೆ ಹೆಚ್ಚಳಕ್ಕೆ ಒತ್ತು ನೀಡಿರುವುದಾಗಿ ತಿಳಿಸಿದೆ.