ಉಡುಪಿ: ಜಾತಿಯ ಕಾರಣಕ್ಕಾಗಿ ನಾಗಪುರದ ಆರ್ಎಸ್ಎಸ್ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸಂಘದ ಬಗ್ಗೆ ತಪ್ಪು ಮಾಹಿತಿ ಇದೆ. ಅವರು ಸಂಘಕ್ಕೆ ಬರಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಗೂಳಿಹಟ್ಟಿ ಆರ್ ಎಸ್ ಎಸ್ ಗೆ ಯಾವಾಗ ಬಂದಿದ್ದರು? ಅವರು ಬಿಜೆಪಿಯ ಸದಸ್ಯರಾಗಿದ್ದರು, ಮಂತ್ರಿಯಾಗಿದ್ದರು. ಆರ್ ಎಸ್ ಎಸ್ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ ಇರಬೇಕು ಅನ್ನೋದು ಸಂಘದ ಆಶಯವಾಗಿದೆ. ಭಾರತದ ಅಭ್ಯುದಯಕ್ಕೆ ಇದುವೇ ಮಾರ್ಗ ಎಂದು ಆರ್ ಎಸ್ ಎಸ್ ನಂಬಿದೆ. ಗೂಳಿಹಟ್ಟಿ ಅವರಿಗೆ ತಪ್ಪು ಮಾಹಿತಿ ಇದೆ, ಸಂಘಕ್ಕೆ ಬರಲಿ ಎಂದರು.
ಮಹುವಾ ಮೊಯಿತ್ರಾ ಸಂಸತ್ ಸ್ಥಾನದಿಂದ ಉಚ್ಚಾಟನೆ ವಿಚಾರವಾಗಿ ಮಾತನಾಡಿದ ಅವರು, ಆಕೆ ನಮ್ಮ ಜೊತೆಗೆ ಸಂಸದೆಯಾಗಿದ್ದವರು. ಸಂಸದರು ಎನ್ನುವ ಪದಕ್ಕೆ ಕಳಂಕ ತಂದವರು. ಪ್ರಶ್ನೆ ಕೇಳುವುದಕ್ಕೆ, ಸಂಸತ್ತಿನಲ್ಲಿ ಮಾತನಾಡುವುದಕ್ಕೆ ಕೂಡ ಭ್ರಷ್ಟಾಚಾರ ಮಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದರು.
ನಾವು ಪ್ರಶ್ನೆಗಳನ್ನು ಗುಪ್ತವಾಗಿ ಇಡಬೇಕು. ಪಾರ್ಲಿಮೆಂಟ್ ಒಳಗೆ ಬರುವ ತನಕ ಉತ್ತರ ಯಾರಿಗೂ ಗೊತ್ತಾಗುವುದಿಲ್ಲ. ಒಂದು ಪ್ರಶ್ನೆಗೆ ಒಬ್ಬ ಅಧಿಕಾರಿ 15- 20 ದಿನ ಶ್ರಮಪಡುತ್ತಾರೆ. ಅಧಿಕಾರಿಗಳ ತಂಡ ಇದಕ್ಕೆ ಕೆಲಸ ಮಾಡುತ್ತದೆ. ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಚರ್ಚೆ ಮಾಡುತ್ತಾರೆ. ಪವಿತ್ರವಾದ ಸದನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಂತ ಲಾಭಕ್ಕಾಗಿ, ಸ್ವಾರ್ಥಕಾಗಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಮತ್ತು ಕೆಟ್ಟ ಸಂದೇಶ ಎಂದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಟಿ ಲೀಲಾವತಿ
ಹಿರಿಯ ನಟಿ ಲೀಲಾವತಿ ನಿಧನದ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಚಿತ್ರರಂಗದ ಹಿರಿ ತಲೆ, ಶ್ರೇಷ್ಠ ಕಲಾವಿದೆ ಲೀಲಾವತಿ ನಮ್ಮನ್ನು ಅಗಲಿದ್ದಾರೆ. ನಮ್ಮೂರಿನವರು ಸಿಕ್ಕಾಗೆಲ್ಲ ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲೇ ನೆಲೆಸಿದ್ದ ಲೀಲಾವತಿ ಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದರು. ಸಮಾಜ ಸೇವೆ, ಪ್ರಾಣಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಲೀಲಾವತಿಯವರು ಕೊನೆಯ ದಿನದವರೆಗೂ ಕಷ್ಟದ ಜೀವನ ಸಾಗಿಸಿದ್ದರು. ವಿನೋದ್ ರಾಜ್, ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದರು.