ಬೆಂಗಳೂರು(Bengaluru): ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮದ ಅನುಪಮ ಸೇವೆಗಾಗಿ ಗೊರೂರು ಪಂಕಜ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವುದಾಗಿ ಆರ್ಯಭಟ ಸಾಂಸ್ಕೃತಿಕ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಗೊರೂರು ಪಂಕಜ ಅವರಿಗೆ ಈಗಾಗಲೇ ಬಿಎಂಶ್ರೀ ಕಾವ್ಯ ಪುಸ್ಕಾರ, ಪ್ರೊ.ಡಿಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ, ಕರ್ನಾಟಕ ಯುವರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ 18 ವಿವಿಧ ಪ್ರಶಸ್ತಿಗಳನ್ನು ಪಡೆದಿರುವ ಪಂಕಜ ಅವರ ಮುಕುಟಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಮತ್ತೊಂದು ಗರಿ.
ಬೆಳಕಾಗುವ ಹಂಬಲ ಎಂಬ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯವಾದ ಪಂಕಜ ಅವರ ಕಥೆ, ಕವನ, ವೈಚಾರಿಕ ಲೇಖನ, ಅಂಕಣ ಬರಹಗಳು ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಕಟಗೊಂಡಿವೆ.
ಇದೇ ೨೫ರಂದು ಸಂಜೆ ೬ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಹೆಸರಾದ ಅರಳಿ ನಾಗರಾಜ್, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹಾಗೂ ವಿವಿಧ ದೇಶಗಳ ಸಾಧಕರುಗಳ ಸಮ್ಮುಖದಲ್ಲಿ ಪಂಕಜ ಅವರು, ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.