ಉಡುಪಿ ಶ್ರೀಕೃಷ್ಣನ ಆಡುಂಬೋಲ. ಕಡಗೋಲ ಕೃಷ್ಣನ ಸುಂದರ ವಿಗ್ರಹವನ್ನು ಪರಮಪೂಜ್ಯ ಮಧ್ವಾಚಾರ್ಯರು ತಂದು ಪ್ರತಿಷ್ಠಾಪಿಸಿದರು. ಅಂದಿನಿಂದ ಉಡುಪಿ ಶ್ರೀಕೃಷ್ಣ ಕ್ಷೇತ್ರವಾಯ್ತು.
ಈಗ ಬೆಂಗಳೂರೂ ಶ್ರೀಕೃಷ್ಣ ಕ್ಷೇತ್ರವಾಗಿದೆ. ಸಿಲಿಕಾನ್ ಸಿಟಿ ನಂದ ಗೋಕುಲವಾಗಲು ಕಾರಣ ಯಾರು ಗೊತ್ತೆ? ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು. ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀಸುಜ್ಞಾನ ಟ್ರಸ್ಟ್ ಮತ್ತು ಶ್ರೀಕೃಷ್ಣ ಸೇವಾ ಸಮಿತಿ ಬೆಂಗಳೂರಿನ ಸುಪ್ರಸಿದ್ಧ ಬಸವನಗುಡಿ ರಸ್ತೆಯ ದೊಡ್ಡಗಣಪನ ಗುಡಿಯ ಪಕ್ಕದಲ್ಲಿರುವ ಪುತ್ತಿಗೆ ಮಠದ ಆವರಣದಲ್ಲಿ ಗೋವರ್ಧನಗಿರಿಯನ್ನೇ ಎತ್ತಿ ಹಿಡಿದ ಶ್ರೀಕೃಷ್ಣನ ಸುಂದರ ವಿಗ್ರಹವನ್ನು ಪ್ರತಿಷ್ಠಾಪಿಸಿದೆ.
ಗುಹಾಲಯ ಒಳ ಹೋಗುತ್ತಿದ್ದಂತೆಯೇ ಶ್ರೀಕೃಷ್ಣನ ಲೀಲೆಗಳನ್ನು ಸಾರುವ ಸುಂದರವಾದ ಆಳೆತ್ತರ ಉಬ್ಬುಶಿಲ್ಪಗಳು ಕಣ್ಮನಸೆಳೆದರೆ, ಬೆಟ್ಟವನ್ನೇ ಎತ್ತಿ ಹಿಡಿದ ಕೃಷ್ಣ ಶಿಲೆಯ ಕೃಷ್ಣನ ಮೂರ್ತಿ ಭಕ್ತಿ ಭಾವ ಮೂಡಿಸುತ್ತದೆ. ಹಿನ್ನೆಲೆಯಲ್ಲಿ ಶ್ರೀಕೃಷ್ಣ ನಾಮ ಸಂಕೀರ್ತನೆ ಕಿವಿಗೆ ಇಂಪು ನೀಡುತ್ತಿರುತ್ತದೆ.
ಹೌದು ಕೃಷ್ಣನೇಕೆ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ .. ಈ ಪ್ರಶ್ನೆ ಎದುರಾಗುವುದು ಸಹಜ.
ಅದನ್ನು ತಿಳಿಯಲು ದ್ವಾಪರಕ್ಕೇ ಹೋಗಬೇಕು. ವಸುದೇವ ದೇವಕಿಯರ ಮಗನಾಗಿ ಹುಟ್ಟಿದ ಶ್ರೀಕೃಷ್ಣ ಬೆಳೆದದ್ದು ಯಶೋದೆಯ ಮಡಿಲಲ್ಲಿ. ನಂದಗೋಪನ ಮನೆಯಲ್ಲಿ. ಒಮ್ಮೆ ನಂದಗೋಪಾದಿಗಳು ದೇವತೆಗಳ ಒಡೆಯನಾದ ಇಂದ್ರನನ್ನು ಕುರಿತು ತಪವನ್ನಾಚರಿಸಲು ನಿರ್ಧರಿಸಿದರು.
ಆದರೆ, ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಚತಿ ಎಂಬುದನ್ನು ಮರೆತು, ತಾನೆ ಎಲ್ಲ ಎಂದು ತಿಳಿದಿದ್ದ ಇಂದ್ರ, ಗೋಪಾಲಕನಾಗಿದ್ದ ಬಾಲಕೃಷ್ಣ ಹರಿ ಎಂಬುದನ್ನೂ ಮರೆತು ಅಹಂಕಾರ ಪಡುತ್ತಿದ್ದ. ಇಂದ್ರನಿಗೆ ಬುದ್ಧಿಕಲಿಸಲು ಶ್ರೀಕೃಷ್ಣನು ಯಾಗ ಸಿದ್ಧತೆ ನಿಲ್ಲಿಸಿ, ನಮಗೆ ನಿತ್ಯನೆರವಾಗುವ ಗೋವುಗಳನ್ನು ಪೂಜಿಸಿ, ಬೆಟ್ಟವನ್ನು ಪೂಜಿಸಿ ಎಂದು ನಂದಗೋಪರ ಮನಃಪರಿವರ್ತನೆ ಮಾಡಿದ.

ಯಾಗ ಸಿದ್ಧತೆ ನಿಂತಿತು. ಬೆಟ್ಟದ ಪೂಜೆ ಆರಂಭವಾಯ್ತು. ರೊಚ್ಚಿಗೆದ್ದ ಇಂದ್ರ ಗೋಕುಲ ನಿವಾಸಿಗಳಿಗೆ ತಕ್ಕಶಾಸ್ತಿ ಮಾಡುತ್ತೇನೆಂದು ವರುಣನಿಗೆ ಆಜ್ಞಾಪಿಸಿ ಕುಂಭದ್ರೋಣವನ್ನೇ ಸುರಿಸಿದ. ತಿಳಿ ನೀಲಿ ಆಗಸ ಕಾರ್ಮೋಡಗಳಿಂದ ಕವಿಯಿತು. ಕಿವಿಗಡಚಿಕ್ಕುವ ಗುಡುಗು ಸಿಡಿಲಿನ ಆರ್ಭಟ.
ಧೋ.. ಎಂಬ ಮಳೆ. ನಿಲ್ಲಲು ಜಾಗವಿಲ್ಲದೆ ಪುರಜನರು ಮತ್ತೆ ಶ್ರೀಕೃಷ್ಣನಿಗೇ ಶರಣಾದರು. ಆಗ ಶ್ರೀಕೃಷ್ಣ ಪರಮಾತ್ಮನು ತನ್ನ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನೇ ಒಂದು ವಾರಕಾಲ ಎತ್ತಿ ಹಿಡಿದು ಗೋವುಗಳಿಗೆ, ಗೋಪಾಲಕರಿಗೆ ಆಶ್ರಯ ನೀಡಿದ.
ಗೋವರ್ಧನಗಿರಿ ಎತ್ತಿ ಗೊಲ್ಲರ ರಕ್ಷಿಸಿದ ಶ್ರೀಕೃಷ್ಣನ ಮಹಿಮೆ ಅರಿತ ಇಂದ್ರನ ಅಹಂಕಾರ ಅಳಿಯಿತು. ಭಕ್ತಿ ಬೆಳೆಯಿತು.
ಇಂದ್ರನ ಅಹಂಕಾರವನ್ನೇ ಅಳಿಸಿದ ಗೋವರ್ಧನ ದಾರಿ ಈಗ ಬೆಂಗಳೂರಿನ ಅಂದವನ್ನೂ ನೂರ್ಮಡಿಗೊಳಿಸಿದ್ದಾನೆ. ಬೆಟ್ಟವೆತ್ತಿ ನಿಂತ ಕೃಷ್ಣನ ಚೆಲುವ ಕಾಣಲು ಕಣ್ಣೆರಡು ಸಾಲದು. ಈ ದೇವಾಲಯದ ಹೊರ ನೋಟ ಕಲ್ಲಿನ ಬಂಡೆಗಳ ನಡುವೆ ಇರುವ ಗುಹೆಯಂತೆ ಕಾಣುತ್ತದೆ.
ಒಳಗೆ ಹೋದರೆ ಆಧುನಿಕ ತಂತ್ರಜ್ಞಾನ ಬಳಸಿ ಮಾಡಲಾದ ಗುಹೆಯೇ ಗೋಚರವಾಗುತ್ತದೆ. ಒಳಗೆ ಪ್ರಶಾಂತ ಪರಿಸರದಲ್ಲಿ ಶ್ರೀಕೃಷ್ಣನ ಕಿರುಬೆರಳು ಇಡೀ ಬೆಟ್ಟವನ್ನೇ ಎತ್ತಿ ಹಿಡಿದಂತೆ ಕಾಣುವಂತೆ ನಿರ್ಮಿಸಲಾಗಿದೆ. ಇದು ನಿಜಕ್ಕೂ ಆಧುನಿಕ ಸ್ಪರ್ಶ, ಪ್ರಾಕ್ತನ ದೃಶ್ಯ ಎಂದರೆ ತಪ್ಪಾಗಲಾರದು. ಇಷ್ಟು ಮನೋಹರವಾದ ಪ್ರಶಾಂತ ತಾಣಕ್ಕೆ ನೀವೂ ಭೇಟಿಕೊಡಿ. ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ.














