ಮನೆ ಕಾನೂನು ಸರ್ಕಾರದ ಪ್ರತಿ ಕೆಲಸವನ್ನೂ ತನಿಖೆ ನಡೆಸಲು ಅನುಮತಿಸಿದರೆ ಆಡಳಿತ ನಡೆಸಲಾಗದು: ಹೈಕೋರ್ಟ್‌

ಸರ್ಕಾರದ ಪ್ರತಿ ಕೆಲಸವನ್ನೂ ತನಿಖೆ ನಡೆಸಲು ಅನುಮತಿಸಿದರೆ ಆಡಳಿತ ನಡೆಸಲಾಗದು: ಹೈಕೋರ್ಟ್‌

0

ಲೋಕೋಪಯೋಗಿ ಇಲಾಖೆ ಮತ್ತು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರದ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು‌ ಮಂಗಳವಾರ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್, “ಸರ್ಕಾರದ ಪ್ರತಿಯೊಂದು ಕೆಲಸವನ್ನೂ ತನಿಖೆ ನಡೆಸಲು ಅನುಮತಿಸಿದರೆ ಆಡಳಿತ ನಡೆಸಲಾಗದು” ಎಂದು ಮೌಖಿಕವಾಗಿ ಹೇಳಿದೆ.

Join Our Whatsapp Group

ಬೀದರ್‌ನ ಗುರುನಾಥ್‌ ವಡ್ಡೆ ಸಲ್ಲಿಸಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠವು ವಜಾ ಮಾಡಿದೆ.

“ಸಾಮಾನ್ಯ ಮೌಲ್ಯಮಾಪನ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ವೇದಿಕೆಯ ಮೂಲಕ ಅರ್ಜಿದಾರರು ಪರಿಹಾರ ಕೋರಿರುವುದಕ್ಕೆ ಅನುಮತಿಸಲಾಗದು. ಇದಕ್ಕೆ ಲೋಕಾಯುಕ್ತದ ಮೂಲಕ ಅಥವಾ ಪ್ರತ್ಯೇಕವಾಗಿ ಕಾನೂನಿನ ಮೂಲಕ ಪರಿಹಾರ ಪಡೆಯಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಜೆ ಆರ್‌ ಮೋಹನ್‌ ಅವರು “ಟೆಂಡರ್‌ ಪ್ರಕ್ರಿಯೆ ನಡೆಸುವಾಗ ಲೋಕೋಪಯೋಗಿ ಇಲಾಖೆ ಮತ್ತು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಮಹಾಲೆಕ್ಕಪರಿಶೋಧಕರು ಮತ್ತು ನಿಯಂತ್ರಕರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ. ಎಲ್ಲೆಲ್ಲಿ ಸರ್ಕಾರದ ಹಣ ದುರ್ಬಳಕೆಯಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ. ಈ ಕುರಿತ ತನಿಖೆ ನಡೆಸಲು ಆದೇಶಿಸಬೇಕು” ಎಂದು ಕೋರಿದರು.

ಆಗ ನ್ಯಾ. ಅರುಣ್‌ ಅವರು “ತನಿಖೆಗೆ ಕೋರಲು ನಿಮ್ಮ ಹಕ್ಕೇನಿದೆ? ನೀವು ಯಾರು? ದುರ್ಬಳಕೆಯಾಗಿದೆ ಎಂದು ಮೇಲ್ನೋಟಕ್ಕೆ ತೋರ್ಪಡಿಸಲು ಏನು ದಾಖಲೆ ಇದೆ? ನೀವು ಬಾದಿತರಾಗಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ, ಅವರು ಪರಿಶೀಲಿಸುತ್ತಾರೆ. ಈ ರೀತಿಯಲ್ಲಿ ಸರ್ಕಾರದ ಪ್ರತಿಯೊಂದು ಕೆಲಸವನ್ನೂ ತನಿಖೆ ಮಾಡಲು ಅನುಮತಿಸಿದರೆ ಆಡಳಿತ ನಡೆಸಲಾಗದು” ಎಂದಿತು.

ಇದಕ್ಕೆ ಜೆ ಆರ್‌ ಮೋಹನ್‌ ಅವರು “ನಾನು ಸಾಮಾನ್ಯ ಮನುಷ್ಯ. ಹಣ ದುರ್ಬಳಕೆಯಾಗಿರುವ ಅಂಶಗಳು ಸಿಎಜಿ ವರದಿಯಲ್ಲಿವೆ” ಎಂದರು. ಅಂತಿಮವಾಗಿ ಪೀಠವು ಲೋಕಾಯುಕ್ತ ಸಂಪರ್ಕಿಸುವಂತೆ ಸಲಹೆ ನೀಡಿದ್ದಕ್ಕೆ ಒಪ್ಪಿದ ಮೋಹನ್‌ ಅವರು “ಅದನ್ನು ಉಲ್ಲೇಖಿಸಿ, ಅರ್ಜಿಯನ್ನು ಇತ್ಯರ್ಥಪಡಿಸಬಹುದು” ಎಂದರು.