ಬೆಂಗಳೂರು: ರಾಜ್ಯದ ಎಲ್ಲಾ 49 ಹೊಸ ತಾಲೂಕುಗಳಿಗೂ ತಾಲೂಕು ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಮುಂದಿನ ಎರಡು-ಮೂರು ವರ್ಷದಲ್ಲಿ ಅನುಮತಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ತಾಲೂಕು ಆಡಳಿತ ಕಟ್ಟಡಗಳ ದುರಸ್ತಿ ಬಗ್ಗೆ ಸೋಮವಾರ ವಿಧಾನ ಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬೈಲಹೊಂಗಲದ ಶಾಸಕ ಕೌಜಲಗಿ ಮಹಾಂತೇಶ್ ಶಿವಾನಂದ್ ಪ್ರಶ್ನಿಸಿದ್ದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “2018ರಲ್ಲಿ 63 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರ 14 ತಾಲೂಕುಗಳಿಗೆ ಮಾತ್ರ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಉಳಿದ 49 ತಾಲೂಕುಗಳಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಮುಂದಿನ ಎರಡು-ಮೂರು ವರ್ಷದಲ್ಲಿ ಈ ಎಲ್ಲಾ ತಾಲೂಕುಗಳಿಗೂ ಹೊಸ ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು” ಎಂದು ಭರವಸೆ ನೀಡಿದರು.
ಮುಂದುವರೆದು, “ಹೊಸ ತಾಲೂಕುಗಳಲ್ಲದೆ, ಹೆಚ್ಚುವರಿಯಾಗಿ 80 ರಿಂದ 100 ತಾಲೂಕುಗಳ ಆಡಳಿತ ಕಚೇರಿಗಳ ದುರಸ್ತಿಯಾಗಬೇಕಿದ್ದು, ಹೊಸ ಆಡಳಿತ ಕಚೇರಿಗಳ ನಿರ್ಮಾಣಕ್ಕೆ ಬೇಡಿಕೆ ಇದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು ಆದ್ಯತೆ ಮೇರೆಗೆ ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.