ನವದೆಹಲಿ: ದೇಶದ ಮಧ್ಯಮವರ್ಗದವರ ಸ್ವಂತ ಸೂರಿನ ಕನಸು ಈಡೇರಿಸಲು ಈ ಸರ್ಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಹೇಳಿದರು.
ಬಜೆಟ್ ಅಧಿವೇಶನ ಆರಂಭದ ದಿನದಂದು ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸರ್ಕಾರದ ಮೂರನೇ ಅವಧಿಯಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತಿದೆ. 70 ವರ್ಷ ಮೇಲಿನ ಆರು ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸೌಕರ್ಯ ನೀಡುವ ಬೃಹತ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ನೂತನ ಶಿಕ್ಷಣ ನೀತಿ ಮೂಲಕ ಯುವ ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡುವುದರಿಂದ ಅವರನ್ನು ಸಶಕ್ತರನ್ನಾಗಿಸಲಾಗುತ್ತಿದೆ ಎಂದರು.
ವಕ್ಫ್ ಆಸ್ತಿ ಹಾಗೂ ಒಂದು ದೇಶ, ಒಂದು ಚುನಾವಣೆ ವಿಷಯದಲ್ಲೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ. ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 91 ಲಕ್ಷ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಬ್ಯಾಂಕಿಂಗ್ ಮತ್ತು ಡಿಜಿ ಪಾವತಿ ಮೂಲಕ ಗ್ರಾಮೀಣ ಭಾಗದ ಜನರನ್ನೂ ದೇಶದ ಆರ್ಥಿಕ ವ್ಯವಸ್ಥೆಯೊಳಗೆ ತರಲಾಗಿದೆ ಎಂದರು.