ಬೆಂಗಳೂರು: ಸರ್ಕಾರಿ ನೌಕರರಿಗೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ. ನನ್ನ ಇಲಾಖೆಯಲ್ಲಿ ಇಂತಹದ್ದನ್ನ ಸಹಿಸೋಕೆ ಸಾಧ್ಯವಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸರ್ಕಾರಿ ನೌಕರರು ತಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಬಹುದು ಆದರೆ ಬೀದಿಗೆ ಬಂದು ಪ್ರತಿಭಟನೆ ಮಾಡುವ ಹಕ್ಕು ಅವರಿಗಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಶಾಲಾ ಕೊಠಡಿಯ ಕೊರತೆ ಕುರಿತು ಪ್ರತಿಭಟಿಸಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಈ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ನೌಕರರಿಗೆ ಕಾನೂನು ಇದೆ. ಇಂತಹ ಸಮಸ್ಯೆ ಇದ್ದರೆ ಇಲಾಖೆ ಗಮನಕ್ಕೆ ತರಬೇಕು. ಬಿಇಓ, ಡಿಡಿಪಿಐಗಳ ಗಮನಕ್ಕೆ ತರಬೇಕು. ಏಕಾಏಕಿ ಪ್ರತಿಭಟನೆ ಮಾಡೋದು ಸರಿಯಲ್ಲ ಎಂದಿದ್ದಾರೆ.
ನನ್ನ ಇಲಾಖೆಯಲ್ಲಿ ಇಂತಹ ಪ್ರತಿಭಟನೆಗಳಿಗೆ ಅವಕಾಶವೇ ಇಲ್ಲ. ನಾವು ಶಾಲಾ ಕಟ್ಟಡಕ್ಕಾಗಿ ವ್ಯವಸ್ಥೆ ಮಾಡಿದ್ದೇವೆ. ಹಾಗೆಯೇ ಶಿಕ್ಷಕರಿಗೆ ವಿಷಯ ಗೊತ್ತಿತ್ತು. ಆದರೂ ಅವರಿಂದ ಪ್ರಾಥಮಿಕ ಹಂತದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.
ಸರ್ಕಾರಿ ನೌಕರರು ಇತಿಮಿತಿಯಲ್ಲಿ ಇರಬೇಕು. ಹೀಗೆ ಮಾಡೋದು ಸರಿಯಲ್ಲ. ಪ್ರತಿಭಟನೆ ಮಾಡೋಕೆ ಸರ್ಕಾರದಲ್ಲಿ ಅವಕಾಶ ಇಲ್ಲ. ಅವರ ಸಮಸ್ಯೆ ಬಗ್ಗೆ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಇಂತಹ ವಿಷಯಕ್ಕೆ ಪ್ರತಿಭಟನೆ ಮಾಡೋದು ಸರಿಯಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಜನರು ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಈಗ ಈ ಪ್ರಕರಣದ ಕುರಿತ ಕಡತ ನನ್ನ ಬಳಿ ಬಂದಿದೆ. ನಾನು ಅದನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.














