ಮನೆ ಕಾನೂನು ಸರ್ಕಾರಿ ಭೂಮಿ ಒತ್ತುವರಿ: ಹೊಣೆಗಾರಿಕೆ ನಿಭಾಯಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಸರ್ಕಾರಿ ಭೂಮಿ ಒತ್ತುವರಿ: ಹೊಣೆಗಾರಿಕೆ ನಿಭಾಯಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

0

ಸರ್ಕಾರಿ ಭೂಮಿ ಒತ್ತುವರಿ ಮಾಡಿ ಬೃಹತ್ ಕಟ್ಟಡ ನಿರ್ಮಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತೆರವು ಕಾರ್ಯಚರಣೆ ನಡೆಸಬೇಕು, ಈ ವಿಚಾರದಲ್ಲಿ ಹೊಣೆಗಾರಿಕೆ ನಿಭಾಯಿಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಸರ್ಕಾರಿ ಭೂಮಿಯೊಂದರ ಒತ್ತುವರಿ ಪ್ರಕರಣದಲ್ಲಿ ತೆರವು ಕಾರ್ಯಚರಣೆ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಈ ಅರ್ಜಿ ರೂಪದಲ್ಲಿ ನ್ಯಾಯಾಲಯದ ಮುಂದಿರುವ ಬೆಂಗಳೂರಿನ ಈ ಒಂದು ಪ್ರಕರಣವು ಕೇವಲ ಒಂದು ಸಣ್ಣ ಉದಾಹರಣೆಯಷ್ಟೆ, ಇಂತಹ ನೂರಾರು ಪ್ರಕರಣಗಳಿದ್ದು, ಅವುಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಪೀಠ ತಾಕೀತು ಮಾಡಿದೆ. ಈ ಆದೇಶದ ಅನುಪಾಲನೆಗೆ ಸರ್ಕಾರ ಮತ್ತು ಬೆಂಗಳೂರು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು, ಆ ಬಗ್ಗೆ ನಾಲ್ಕು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಸರ್ಕಾರಿ ವಕೀಲರು ಅವರು, ಹೈಕೋರ್ಟ್ ನಿರ್ದೇಶನದಂತೆ ಪ್ರಕರಣದಲ್ಲಿ 1 ಎಕರೆ 9 ಗುಂಟೆ ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡದ ಮಾಲೀಕರಿಗೆ ನಿಯಮದಂತೆ ಜಿಲ್ಲಾ ದಂಡಾಧಿಕಾರಿ ಕಚೇರಿಯಿಂದ ಜಾರಿಗೊಳಿಸಿರುವ ನೋಟಿಸ್‌ ಗೆ ಉತ್ತರ ನೀಡಿಲ್ಲ. ಪ್ರಕರಣದ ಎಲ್ಲ ಮಾಹಿತಿಯನ್ನು ವರದಿಯ ರೂಪದಲ್ಲಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅನಧಿಕೃತ ಕಟ್ಟಡ ನಿರ್ಮಾಣವಾಗಲು ಅಧಿಕಾರಿಗಳೇ ಕಾರಣ. ಹೀಗಾಗಿ, ಅಧಿಕಾರಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು. ಒಂದೆಡೆ ಒತ್ತುವರಿ ತೆರವು ಕಾರ್ಯ ಮಾಡಬೇಕು. ಮತ್ತೊಂದೆಡೆ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ, ಅವರಿಂದ ದಂಡ ವಸೂಲು ಮಾಡಲು ಸರ್ಕಾರ ಮುಂದಾಗಬೇಕು. ಕಠಿಣ ಕ್ರಮ ಜರುಗಿಸದಿದ್ದರೆ ಅಕ್ರಮ ಕಟ್ಟಡಗಳ ನಿರ್ಮಾಣ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಕಟುವಾಗಿ ನುಡಿಯಿತು.

ಸರ್ಕಾರಿ ಭೂಮಿ ದುರುಪಯೋಗ ಆಗುವುದನ್ನು ತಡೆಯಬೇಕು. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸುವವರು ಅಥವಾ ಆ ಕಟ್ಟಡಗಳ ವಾಸಿಗಳು ಕ್ರಮದಿಂದ ತಪ್ಪಿಸಿಕೊಳ್ಳಬಾರದು. ಅವರಿಗೆ ನೋಟಿಸ್ ನೀಡಿ ಕಾನೂನು ರೀತಿಯಲ್ಲಿ ಜರುಗಿಸಬೇಕು ಎಂದು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಿತು.