ಸರ್ಕಾರಿ ವಕೀಲರನ್ನು ನೇಮಕ ಮಾಡಿಕೊಳ್ಳುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಕೀಲರಿಗೆ ಒಟ್ಟಾರೆ ಶೇಕಡಾ 24ರಷ್ಟು ಮೀಸಲಾತಿ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆಯು ಈಚೆಗೆ ಆದೇಶಿಸಿದೆ.
ಸರ್ಕಾರಿ ವಕೀಲರನ್ನು ನೇಮಿಸುವಾಗ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಪರಿಶಿಷ್ಟ ಜಾತಿ ವಕೀಲರಿಗೆ ಶೇ. 17 ಮತ್ತು ಪರಿಶಿಷ್ಟ ಪಂಗಡಗಳ ವಕೀಲರಿಗೆ ಶೇ. 7 ಸೇರಿ ಒಟ್ಟು ಶೇ.24ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ನವೆಂಬರ್ 30ರಂದು ಇಲಾಖೆಯು ಆದೇಶಿಸಿದೆ.
2023ರ ಜೂನ್ 1ರಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಇಲಾಖೆ ಮತ್ತು ಸಂಬಂಧಿತ ನಿಗಮಗಳ ಅಧಿಕಾರಿಗಳೊಂದಿಗೆ ನಡೆದಿದ್ದ ಸಭೆಯಲ್ಲಿ ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಠ ಶೇ. 24ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಕೀಲರನ್ನು ನೇಮಿಸಿಕೊಳ್ಳಲು ಕಾನೂನು ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಮತ್ತು ಸಭಾ ನಡಾವಳಿಯಲ್ಲಿ ಕ್ರಮವಹಿಸಲು ನಿರ್ದೇಶಿಸಿದ್ದರು. ಇದರ ಅನ್ವಯ ಕಾನೂನು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿ 2024ರ ಅಕ್ಟೋಬರ್ 22ರಂದು ಕಾನೂನು ಇಲಾಖೆಯ ಅಭಿಪ್ರಾಯ ನೀಡಿತ್ತು. ಇದರ ಬೆನ್ನಿಗೇ ಸಮಾಜ ಕಲ್ಯಾಣ ಇಲಾಖೆ ಆದೇಶ ಮಾಡಿದೆ.