ಮನೆ ರಾಜ್ಯ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸದ ಸರ್ಕಾರ: ಆರ್.ಅಶೋಕ್ ಟೀಕೆ

ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸದ ಸರ್ಕಾರ: ಆರ್.ಅಶೋಕ್ ಟೀಕೆ

0

ಮಂಡ್ಯ: ಇಡೀ ಸರ್ಕಾರ ಬೆಳಗಾವಿಯಲ್ಲೇ ಇದ್ದ ಸಮಯದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ನಡೆದದ್ದು ತಲೆ ತಗ್ಗಿಸುವ ಸಂಗತಿ. ಸರ್ಕಾರ ಈ ಪ್ರಕರಣದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಭ್ರೂಣಹತ್ಯೆ ಖಂಡಿಸಿ ಬಿಜೆಪಿಯು ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು.ಸರ್ಕಾರದ ಪ್ರತಿನಿಧಿಗಳು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಮಂತ್ರಿ, ಮುಖ್ಯಮಂತ್ರಿ, ಗೃಹ ಸಚಿವರು ಯಾರೂ ಘಟನಾ ಸ್ಥಳಕ್ಕೆ ಹೋಗಲಿಲ್ಲ.ದೇಶವ್ಯಾಪಿ ಪ್ರತಿಭಟನೆ ನಡೆದ ಬಳಿಕ ಮುಖ್ಯಮಂತ್ರಿ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಲ್ಲದಿದ್ದರೆ ಈ ಪರಿಹಾರವನ್ನೂ ನೀಡುತ್ತಿರಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ನಿಲುವಳಿ ಸೂಚನೆ ತಂದಿದ್ದೆ‌. ದಲಿತ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಚರ್ಚೆಯ ಅಜೆಂಡಾದಲ್ಲಿತ್ತು. ಆದರೆ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಉತ್ತರ ನೀಡಿ, ಸಮಯ ವ್ಯರ್ಥ ಮಾಡಿದರು. ಮಹಿಳೆ ಪ್ರಕರಣ ಚರ್ಚೆಗೆ ಬರುತ್ತದೆ ಎಂದು ಪಲಾಯನ ಮಾಡಿದರು’ ಎಂದು ದೂರಿದರು.

ಘಟನಾ ಸ್ಥಳ ಪರಿಶೀಲನೆಗೆ ನಾಲ್ಕು ದಿನವಾದ ಮೇಲೆ ದೆಹಲಿಯಿಂದ ನಿಯೋಗ ಬರುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. 4 ದಿನ ನೀವು ಘಟನೆ ಮುಚ್ಚಿ ಹಾಕಿದ್ರಿ. ಯಾರು ಹೋಗದ ಹಾಗೇ ನೋಡಿಕೊಂಡಿದ್ದೀರಿ.ನಾನು ಅಲ್ಲಿಗೆ ಹೋಗುವವರೆಗೂ ಘಟನೆ ಬಗ್ಗೆ ಗೊತ್ತಾಗಿರಲಿಲ್ಲ. ಅಲ್ಲಿ ನಡೆದ ಘಟನೆ ಬಗ್ಗೆ ಹೇಳಲು ಆಗಲ್ಲ. ಅಷ್ಟು ಹೊಲಸಾಗಿ ನಡೆದಿದೆ. ನ್ಯಾಯಾಲಯ ಕೂಡ ಕಾಂಗ್ರೆಸ್‌ಗೆ ಛೀಮಾರಿ ಹಾಕಿದೆ ಎಂದು ಹೇಳಿದರು.

ಸಂತಸ್ತ ಮಹಿಳೆ ಈಗ ಆಸ್ಪತ್ರೆಯಲ್ಲಿದ್ದಾರೆ. ಮುಂದೆ ಊರಲ್ಲಿ ಹೇಗೆ ಬದುಕುತ್ತಾರೆ? ಕಾನೂನು ಸುವ್ಯವಸ್ಥೆ ಹೇಗೆ ಹಾಳಾಗಿದೆ ಎಂಬುದಕ್ಕೆ ಇದು ಉದಾಹರಣೆ. ಇಷ್ಟಾದರೂ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡದೆ ಮೋಸ‌ ಮಾಡಿದ್ದಾರೆ. ಸ್ಪೀಕರ್ ಕೂಡ ಮಲತಾಯಿ ಧೋರಣೆ ತೋರಿದ್ದಾರೆ ಎಂದು ದೂರಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರು ನಾಮಕರಣ ಮಾಡಬೇಕೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೀಗೆ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನ‌ ಬುದ್ದಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಟಿಪ್ಪು ಒಬ್ಬ ಮತಾಂಧ.ಮಂಡ್ಯದಲ್ಲಿ ಅವನ ಚರಿತ್ರೆ ಇದೆ. ಕೊಡಗಿನಲ್ಲಿ ಹಿಂದೂಗಳ ಹತ್ಯೆ ಮಾಡಿದ್ದ ಚರಿತ್ರೆ ಇದೆ.ಮೇಲುಕೋಟೆಯಲ್ಲಿ ಬ್ರಾಹ್ಮಣರನ್ನು ಕಟ್ಟಿ ಹಾಕಿ ಕತ್ತರಿಸಿ ಹಾಕಿದ್ದ ಇತಿಹಾಸ ಇದೆ ಎಂದು ಕಿಡಿಕಾರಿದರು.

ಮೈಸೂರಿನ ಆಡಳಿತ ನಡೆಸುತ್ತಿದ್ದವರು ಒಡೆಯರ್ ವಂಶಸ್ಥರು. ಹೈದರಾಲಿ ಕೂಲಿಗೆ ಬಂದವನು ಒಡೆಯರ್ ಗೆ ಮೋಸ ಮಾಡಿ ಸಿಂಹಾಸನ ಏರಿದ. ಟಿಪ್ಪುನ ಹೋರಾಟಗಾರ ಎನ್ನುವವರಿಗೆ ನಾಚಿಕೆ ಆಗಬೇಕು. ಟಿಪ್ಪು, ಹೈದರಾಲಿ ಡ್ಯಾಂ ಕಟ್ಟಿಸಿದ್ದಾರಾ? ಒಂದು ಕೆರೆ ಕಟ್ಟಿಸಿದ್ದಾರಾ? ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕಟ್ಟಿಸಿದ್ದಾರಾ? ಎಂದು ಪ್ರಶ್ನಿಸಿದರು. ‘ಕೇವಲ ವೋಟಿಗಾಗಿ ಕಾಂಗ್ರೆಸ್‌ನವರು ಟಿಪ್ಪುವನ್ನು ಹೋರಾಟಗಾರ ಎಂದು ಕರೆಯುತ್ತಾರೆ. ಕಾಂಗ್ರೆಸ್‌ನವರು ಟಿಪ್ಪು ಸಿದ್ದಾಂತದ ಮೇಲೆ ಬಂದಿದ್ದಾರೆ. ನಾವು ಹಿಂದುತ್ವದ ಸಿದ್ಧಾಂತದ ಮೇಲೆ ಬಂದಿದ್ದೇವೆ. ಜನರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಸಂಸತ್ ಒಳಗೆ ಪ್ರವೇಶಿಸಿ ಹೊಗೆ ಬಾಂಬ್ ಸಿಡಿಸಿ ದಾಂದಲೆ ನಡೆಸಿದ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಎಲ್ಲ ಸಂಸದರು ನೀಡಿದ ಹಾಗೆ ಪ್ರತಾಪ್ ಸಿಂಹ ಕೂಡ ಪಾಸ್ ನೀಡಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ನಡೆಯಲಿದೆ. ಈ ಬಗ್ಗೆ ಕಾಂಗ್ರೆಸ್ ಆರೋಪ ಸರಿಯಲ್ಲ. ಪ್ರತಾಪ್ ಸಿಂಹ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವವರು, ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾರಾ’ ಎಂದು ಪ್ರಶ್ನಿಸಿದರು.

ಮುಂದಿನ ಬಜೆಟ್ ನಾನೇ ಮಂಡಿಸುವುದಾಗಿ ಮುಖ್ಯಮಂತ್ರಿ ಹೇಳಿದರೆ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದವರು ಮಂಡಿಸುತ್ತಾರೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕ ಹರಿಪ್ರಸಾದ್ ಮುಖ್ಯಮಂತ್ರಿ ಗಾದಿಗೆ ಏರಿಸೋದು ಗೊತ್ತು,ಇಳಿಸುವುದು ಗೊತ್ತು ಎಂದರೆ, ಪರಮೇಶ್ವರ್ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಇವರೆಲ್ಲ ಹೀಗೆ ಹೇಳುವಾಗ ಸಿದ್ದರಾಮಯ್ಯ ದಮ್ಮು,ತಾಕತ್ತು ಎಲ್ಲಿ ಹೋಗಿದೆ ಎಂದು ಕೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಕೆ.ಎಸ್.ನಂಜುಂಡೇಗೌಡ,ಅಶೋಕ್ ಜಯರಾಮ್,ಇಂಡುವಾಳು ಸಚ್ಚಿದಾನಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ಲೇಖನಮಹಿಳೆಗೆ ಥಳಿತ ಪ್ರಕರಣ: ಸಂತ್ರಸ್ತೆಯ ಭೇಟಿಗೆ ನಿರ್ಬಂಧ ವಿಧಿಸಿದ ಹೈಕೋರ್ಟ್
ಮುಂದಿನ ಲೇಖನಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಿಎಂ ತೀವ್ರ ಖಂಡನೆ