ಸುಳ್ಳು ಪ್ರಕರಣ ದಾಖಲಿಸುವ ಪೊಲೀಸ್ ಅಧಿಕಾರಿ ಅಧಿಕೃತ ಕರ್ತವ್ಯದ ನೆಪದಲ್ಲಿ ಕಾನೂನು ಕ್ರಮದಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳಿಗೆ ಸಿಆರ್ಪಿಸಿ ಸೆಕ್ಷನ್ 197ರ ರಕ್ಷಣೆ ಒದಗಿಸಲಾಗದು ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಸಿಆರ್ಪಿಸಿ ಸೆಕ್ಷನ್ 197 ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದರೆ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುತ್ತದೆ. ಅಂತಹ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಅದು ಹೇಳುತ್ತದೆ.
“ ತಾನು ಹೇಳಿದಂತೆ ಹೇಳಿಕೆ ನೀಡು ಎಂದು ಬೆದರಿಕೆ ಹಾಕುವುದು ಇಲ್ಲವೇ ಖಾಲಿ ಕಾಗದದ ಮೇಲೆ ಸಹ ಹಾಕಲು ಯತ್ನಿಸುವುದು, ಆರೋಪಿಯನ್ನು ಅಕ್ರಮವಾಗಿ ಬಂಧಿಸಿ ಇರಿಸಿಕೊಳ್ಳುವುದು, ಸುಳ್ಳು ಇಲ್ಲವೇ ಕೃತಕ ದಾಖಲೆಗಳ ಸೃಷ್ಟಿಗಾಗಿ ಪಿತೂರಿಯಲ್ಲಿ ತೊಡಗುವುದು, ವ್ಯಕ್ತಿಗೆ ಕಿರುಕುಳ ನೀಡುವ ಬೆದರಿಕೆ ಹಾಕುವ ಏಕೈಕ ಉದ್ದೇಶದಿಂದ ಶೋಧ ಕಾರ್ಯ ನಡಸುವುದು ಇತ್ಯಾದಿಗಳು ಸಿಆರ್ಪಿಸಿ ಸೆಕ್ಷನ್ 197ರ ಅಡಿ ರಕ್ಷಣೆಯ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂದು ನ್ಯಾಯಾಲಯ ನುಡಿದಿದೆ.
ಹೀಗಾಗಿ ಪೊಲೀಸ್ ಅಧಿಕಾರಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪ ಕೇಳಿ ಬಂದಾಗ ಅವರಿಗೆ ಸಿಆರ್ಪಿಸಿ ಸೆಕ್ಷನ್ 197ರ ಅಡಿ ರಕ್ಷಣೆ ನೀಡಲಾಗದು. ಅಲ್ಲದೆ ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ದಾಖಲೆಗಳನ್ನು ಸೃಷ್ಟಿಸುವುದು ಸರ್ಕಾರಿ ಅಧಿಕಾರಿಯ ಅಧಿಕೃತ ಕರ್ತವ್ಯದ ಭಾಗವಲ್ಲ ಎಂದು ಅದು ತೀರ್ಪು ನೀಡಿದೆ.
ಅಧಿಕೃತ ಕರ್ತವ್ಯದಡಿ ಸುಳ್ಳು ಪ್ರಕರಣ ದಾಖಲಿಸುವಂತಹ ಪ್ರಮಾದಕರ ಕೃತ್ಯ ತನ್ನಷ್ಟಕ್ಕೆ ತಾನೇ ಸೆಕ್ಷನ್ 197ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಅದು ಒತ್ತಿ ಹೇಳಿದೆ.
ಮಧ್ಯಪ್ರದೇಶ ಪೊಲೀಸ್ ಅಧಿಕಾರಿಗಳು ಉತ್ತರಪ್ರದೇಶದಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದವನ ಪರವಾಗಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರಗಳನ್ನು ತಿಳಿಸಿದೆ.
ಶಿಕ್ಷಕ ಸುಮನ್ ಪ್ರಕಾಶ್ ಯಾದವ್ ಅವರನ್ನು ಸುರೇಂದರ್ ಸಿಂಗ್ ಗುರ್ಜರ್, ವೀರಭನ್ ಗುರ್ಜರ್, ಅಶೋಕ್ ದೀಕ್ಷಿತ್, ಪಪ್ಪು ದೀಕ್ಷಿತ್, ಸಂಜಯ್ ದೀಕ್ಷಿತ್ ಮತ್ತು ಇತರ ಮೂವರು 2007 ರ ಅಕ್ಟೋಬರ್ 12 ರಂದು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅದೇ ದಿನ ಮಧ್ಯ ಪ್ರದೇಶ ಪೊಲೀಸರು ಅಶೋಕ್ ದೀಕ್ಷಿತ್ ಅವರನ್ನು ಅಬಕಾರಿ ಕಾಯ್ದೆಯಡಿಯಲ್ಲಿ 12 ಅಕ್ರಮ ವಿದೇಶಿ ಮದ್ಯವನ್ನು ಸಾಗಿಸಿದ ಪ್ರಕರಣದಲ್ಲಿ ಬಂಧಿಸಿ ಬಿಡುಗಡೆ ಮಾಡಿದ್ದರು. ಮಧ್ಯಪ್ರದೇಶದ ಪೊಲೀಸರೊಬ್ಬರ ಸಂಬಂಧಿಯಾದ ದೀಕ್ಷಿತ್ ಪರವಾಗಿ ಸುಳ್ಳು ದಾಖಲೆ ಸೃಷ್ಟಿಸುವುದಕ್ಕಾಗಿ ಅಬಕಾರಿ ಕಾಯಿದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂಬುದು ಉತ್ತರ ಪ್ರದೇಶ ಪೊಲೀಸರಿಗೆ ತಿಳಿದು ಬಂದಿತ್ತು.
ಆರೋಪಿ ಸ್ಥಾನದಲ್ಲಿರುವ ಮೂವರು ಆರೋಪಿ ಪೊಲೀಸ್ ಅಧಿಕಾರಿಗಳು ತಮ್ಮನ್ನು ಸಮರ್ಥಿಸಿಕೊಳ್ಳುವಂತಹ ಸಾಕ್ಷ್ಯವನ್ನು ನೀಡಿಲ್ಲ ಎಂದಿರುವ ಪೀಠ ಪ್ರಾಥಮಿಕ ಹಂತದಲ್ಲಿ ಹೈಕೋರ್ಟ್ ವಿಚಾರಣೆಯನ್ನು ರದ್ದುಗೊಳಿಸಬಾರದಿತ್ತು ಎಂದಿದೆ. ಹೀಗಾಗಿ ವಿಚಾರಣೆ ಮುಂದುವರೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದ ಅದು ಇದು ಸುಳ್ಳು ಪ್ರಕರಣ ಅಲ್ಲ ಎಂದು ಸಾಬೀತಾದರೆ ಆಗ ವಿಚಾರಣೆಗೆ ತಡೆ ನೀಡಬಹುದು ಎಂದಿದೆ.