ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್’ಐ) ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ತಮ್ಮ ರಾಜೀನಾಮೆ ನೀಡುವುದೂ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಧರಣಿಯನ್ನು ಅಂತ್ಯಗೊಳಿಸಿದ್ದಾರೆ.
ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಫೆಡರೇಷನ್ನಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಖ್ಯಾತನಾಮ ಕುಸ್ತಿಪಟುಗಳು ಬುಧವಾರದಿಂದ ಧರಣಿ ಆರಂಭಿಸಿದ್ದರು.
ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಶುಕ್ರವಾರ ರಾತ್ರಿ ಎರಡನೇ ಸುತ್ತಿನ ಮಾತುಕತೆಯ ನಡೆಸಿದರು. ಮಾತುಕತೆ ವೇಳೆ ಸರ್ಕಾರ ಹೋರಾಟಗಾರರ ದೂರುಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ.
ಅದೇ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸಲು ಹೋರಾಟಗಾರರು ನಿರ್ಧರಿಸಿದರು.
ಡಬ್ಲ್ಯುಎಫ್ಐ ಅಧ್ಯಕ್ಷರ ಮೇಲೆ ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ತನಿಖೆ ಮಾಡಲು ಉಸ್ತುವಾರಿ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಶನಿವಾರದಂದು ಸದಸ್ಯರನ್ನು ಹೆಸರಿಸಲಾಗುವುದು. ಸಮಿತಿಯು ಫೆಡರೇಶನ್ನ ದೈನಂದಿನ ವ್ಯವಹಾರಗಳ ಮೇಲೆ ನಿಗಾ ವಹಿಸಲಿದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಸಮಿತಿಯು ಒಂದು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಎಂದು ಠಾಕೂರ್ ತಿಳಿಸಿದರು.
ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕೆಂದು ನಿರ್ಧರಿಸಲಾಗಿದೆ. ಸದಸ್ಯರ ಹೆಸರುಗಳನ್ನು ನಾಳೆ ಪ್ರಕಟಿಸಲಾಗುವುದು. ಸಮಿತಿಯು ನಾಲ್ಕು ವಾರಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸುತ್ತದೆ. ಡಬ್ಲ್ಯುಎಫ್’ಐ ಮತ್ತು ಅದರ ಅಧ್ಯಕ್ಷರ ವಿರುದ್ಧ ಹೊರಿಸಲಾದ ಆರ್ಥಿಕ ಅಥವಾ ಲೈಂಗಿಕ ಕಿರುಕುಳದ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತದೆ ಎಂದು ಠಾಕೂರ್ ಹೇಳಿದರು.
ತನಿಖೆ ನಡೆಯುವವರೆಗೆ ಸಿಂಗ್ ಅವರು ಡಬ್ಲ್ಯುಎಫ್’ಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಬೇಕು. ತನಿಖೆಗೆ ಸಹಕರಿಸಬೇಕು. ಉಸ್ತುವಾರಿ ಸಮಿತಿಯು ಡಬ್ಲ್ಯುಎಫ್’ಐನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲಿದೆ ಎಂದು ಠಾಕೂರ್ ತಿಳಿಸಿದರು.