ಮನೆ ಸುದ್ದಿ ಜಾಲ ರೌಡಿಸಂಗೆ ಕಡಿವಾಣ ಹಾಕಲು ಸರ್ಕಾರದ ಮಹತ್ವದ ಹೆಜ್ಜೆ: ರಾಜ್ಯದಾದ್ಯಂತ Anti-Rowdy Squad ರಚನೆಗೆ ಆದೇಶ; ಇನ್ನು...

ರೌಡಿಸಂಗೆ ಕಡಿವಾಣ ಹಾಕಲು ಸರ್ಕಾರದ ಮಹತ್ವದ ಹೆಜ್ಜೆ: ರಾಜ್ಯದಾದ್ಯಂತ Anti-Rowdy Squad ರಚನೆಗೆ ಆದೇಶ; ಇನ್ನು ಪುಂಡರ ಮೇಲೆ 24×7 ಪೊಲೀಸರ ನಿಗಾ..!

0

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ, ಸಂಘಟಿತ ಅಪರಾಧ ಚಟುವಟಿಕೆಗಳು ಹಾಗೂ ಸಮಾಜವಿರೋಧಿ ಕೃತ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ರಾಜ್ಯದ ಎಲ್ಲ ಪೊಲೀಸ್ ವಲಯಗಳು ಹಾಗೂ ಪೊಲೀಸ್ ಠಾಣೆ ಮಟ್ಟದಲ್ಲಿ ವಿಶೇಷ ಆ್ಯಂಟಿ-ರೌಡಿ ಸ್ಕ್ವಾಡ್‌ಗಳನ್ನು ರಚಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ಈ ಕ್ರಮ ಜಾರಿಗೆ ತರಲಾಗುತ್ತಿದ್ದು, ಸಮಾಜವಿರೋಧಿ ಶಕ್ತಿಗಳು, ರೌಡಿಶೀಟರ್‌ಗಳು ಹಾಗೂ ಅಪರಾಧಿ ಗುಂಪುಗಳ ವಿರುದ್ಧ ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆ ನಡೆಸುವ ಉದ್ದೇಶ ಹೊಂದಿದೆ.

ನಗರ ಪ್ರದೇಶಗಳ ಜೊತೆಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಅಪರಾಧ ಚಟುವಟಿಕೆಗಳನ್ನು ತಡೆಯಲು ಈ ಸ್ಕ್ವಾಡ್‌ಗಳು ಕಾರ್ಯನಿರ್ವಹಿಸಲಿವೆ.

ಹೊಸ ಆದೇಶದ ಪ್ರಕಾರ, ಪ್ರತಿ ಪೊಲೀಸ್ ವಲಯದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ರೌಡಿ ಸ್ಕ್ವಾಡ್ ಕಾರ್ಯನಿರ್ವಹಿಸಲಿದೆ. ಅದೇ ರೀತಿಯಾಗಿ, ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಪ್ರತ್ಯೇಕ ಠಾಣೆ ಮಟ್ಟದ ಸ್ಕ್ವಾಡ್ ರಚಿಸಲಾಗುತ್ತದೆ.

ಸ್ಥಳೀಯ ಅಪರಾಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅಥವಾ ಸಹಾಯಕ ಪೊಲೀಸ್ ಆಯುಕ್ತರು (ACP) ಸ್ಕ್ವಾಡ್ ಸದಸ್ಯರ ಸಂಖ್ಯೆ ಹಾಗೂ ಅದರ ರಚನೆಯನ್ನು ನಿರ್ಧರಿಸಲಿದ್ದಾರೆ.

ಈ ಸ್ಕ್ವಾಡ್‌ಗಳ ಪ್ರಮುಖ ಜವಾಬ್ದಾರಿಗಳಲ್ಲಿ ರೌಡಿಶೀಟರ್‌ಗಳ ಗುರುತಿಸುವಿಕೆ, ಅವರ ಚಟುವಟಿಕೆಗಳ ಮೇಲ್ವಿಚಾರಣೆ, ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಪರಿಶೀಲನೆ ಹಾಗೂ ಅಗತ್ಯವಿದ್ದರೆ ಹೊಸ ರೌಡಿಶೀಟ್ ತೆರೆಯುವುದು ಸೇರಿದೆ. ಜೊತೆಗೆ, ಅಪರಾಧಿ ಗ್ಯಾಂಗ್‌ಗಳ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ಸಂಗ್ರಹಿಸಿ, ಸಮಾಜವಿರೋಧಿ ವ್ಯಕ್ತಿಗಳ ಮೇಲೆ ನಿರಂತರ ನಿಗಾ ಇರಿಸುವ ಜವಾಬ್ದಾರಿಯನ್ನೂ ಸ್ಕ್ವಾಡ್ ನಿರ್ವಹಿಸಲಿದೆ.

ಇದಲ್ಲದೆ, ನ್ಯಾಯಾಲಯಗಳಿಂದ ಹೊರಡಿಸಲಾದ ವಾರಂಟ್‌ಗಳ ಜಾರಿ, ಮುನ್ನೆಚ್ಚರಿಕಾ ಕ್ರಮಗಳ ಅನುಷ್ಠಾನ, ಅಗತ್ಯವಿದ್ದಲ್ಲಿ ಗೂಂಡಾ ಕಾಯ್ದೆ ಹಾಗೂ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಮತ್ತು ಅಪರಾಧ ಪೀಡಿತ ಪ್ರದೇಶಗಳಲ್ಲಿ ದಿಢೀರ್ ತಪಾಸಣೆ ನಡೆಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಸ್ಕ್ವಾಡ್‌ಗೆ ವಹಿಸಲಾಗಿದೆ.

ಪೊಲೀಸ್ ಇಲಾಖೆಯ ಸುತ್ತೋಲೆಯ ಪ್ರಕಾರ, ಪ್ರತಿ ಠಾಣೆಯಲ್ಲೂ ರೌಡಿಶೀಟರ್‌ಗಳ ನವೀಕೃತ ದಾಖಲೆಗಳನ್ನು ನಿರ್ವಹಿಸಬೇಕು. ಅವರ ಚಲನವಲನ, ಚಟುವಟಿಕೆಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಮಾಸಿಕ ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಸ್ಕ್ವಾಡ್ ರಚನೆಯ ಅನುಷ್ಠಾನ ವರದಿಯನ್ನು ಏಳು ದಿನಗಳೊಳಗೆ ಸಲ್ಲಿಸುವಂತೆ ಎಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ರೌಡಿಸಂ, ಸುಲಿಗೆ, ಬೆದರಿಕೆ ಹಾಗೂ ಸಂಘಟಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರಾಜ್ಯಮಟ್ಟದಲ್ಲಿ ಸಮನ್ವಯಿತ ಕಾರ್ಯಾಚರಣೆಗೆ ಮುಂದಾಗಿದ್ದು, ಹೊಸ ಆ್ಯಂಟಿ-ರೌಡಿ ಸ್ಕ್ವಾಡ್‌ಗಳು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಪೊಲೀಸ್ ಇಲಾಖೆಯ ಈ ಕ್ರಮವನ್ನು ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗುತ್ತಿದ್ದು, ರೌಡಿಶೀಟರ್‌ಗಳು ಹಾಗೂ ಸಂಘಟಿತ ಅಪರಾಧ ಜಾಲಗಳ ವಿರುದ್ಧ ರಾಜ್ಯಾದ್ಯಂತ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳು ಮುಂದಿನ ದಿನಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ.