ಮನೆ ರಾಜ್ಯ ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಹೋಗದ ವಾಹನದಂತಾಗಿದೆ ಸರಕಾರದ ಪರಿಸ್ಥಿತಿ: ಬಿ.ಎಸ್. ಯಡಿಯೂರಪ್ಪ ಟೀಕೆ

ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಹೋಗದ ವಾಹನದಂತಾಗಿದೆ ಸರಕಾರದ ಪರಿಸ್ಥಿತಿ: ಬಿ.ಎಸ್. ಯಡಿಯೂರಪ್ಪ ಟೀಕೆ

0

ಬೆಂಗಳೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸರಕಾರ ಮುಂದೆ ಹೋಗುತ್ತಿಲ್ಲ. ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಹೋಗದ ವಾಹನದಂತಾಗಿದೆ ಸರಕಾರದ ಪರಿಸ್ಥಿತಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ಅಪಾರ ಭರವಸೆ ನೀಡಿದ ನಂತರ ಅಧಿಕಾರಕ್ಕೆ ಬಂದ ಈ ಸರಕಾರವು ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಸಿದ್ದರಾಮಯ್ಯನವರು ಎರಡನೇ ಅವಧಿಯಲ್ಲಿ ಪಕ್ಷದ ಮೇಲೆ ಹಿಡಿತ ಇಲ್ಲದ, ಸರಕಾರದ ಮೇಲೆ ನಿಯಂತ್ರಣ ಇಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ವಿಶ್ಲೇಷಿಸಿದರು.

ಉಚಿತ ಬಸ್ ಪ್ರಯಾಣ ಯೋಜನೆ ಹೊರತುಪಡಿಸಿದರೆ ಗೃಹಲಕ್ಷ್ಮಿ ಯೋಜನೆಯು ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ. ಬರಿಯ ಉಚಿತ ಕೊಡುಗೆಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಉಚಿತವಾಗಿ ವಿದ್ಯುತ್ ಕೊಡುವುದಾಗಿ ಹೇಳಿದವರು ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಬರಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸೇರಿ ಒಬ್ಬರೇ ಒಬ್ಬ ಸಚಿವರೂ ಹೋಗಿ ಅಲ್ಲಿನ ವಾಸ್ತವಿಕ ಸ್ಥಿತಿ ತಿಳಿಯಲಿಲ್ಲ. ಸರಕಾರ ದಿವಾಳಿಯಾಗಿದ್ದು, ಎಂಎಲ್‍ಎ ಅನುದಾನದ ಎರಡು ಕೋಟಿ ಪೈಕಿ ಕೇವಲ 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಪ್ರಮುಖವಾದ ಎಸ್‍ಸಿ , ಎಸ್‍ಟಿ ಯೋಜನೆಗಳ ಅನುಷ್ಠಾನಕ್ಕೆ ನಿಗಮಗಳಿಗೆ ಹಣ ಬಿಡುಗಡೆ ಮಾಡಿಲ್ಲ. ತಾಂಡಾ ನಿಗಮ, ಅಂಬೇಡ್ಕರ್ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ ಸೇರಿ ಯಾವುದಕ್ಕೂ ಒಂದು ಪೈಸೆ ಹಣ ನೀಡಿಲ್ಲ ಎಂದು ಆರೋಪಿಸಿದರು.

ಅಭಿವೃದ್ಧಿ ಕಾರ್ಯಗಳು ರಾಜ್ಯದೆಲ್ಲೆಡೆ ಸಂಪೂರ್ಣ ಸ್ಥಗಿತವಾಗಿದೆ. ಐಟಿ ದಾಳಿಯಲ್ಲಿ 100 ಕೋಟಿ ಲಭಿಸಿದ್ದು, ಸರಕಾರದ ಭ್ರಷ್ಟಾಚಾರ ಬಯಲಾಗಿದೆ. ಲೂಟಿಕೋರ ಸರಕಾರ ಇದೆಂದು ಸಾಬೀತಾಗಿದೆ ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವೆ ನಾಯಕತ್ವಕ್ಕಾಗಿ ಬಣಗಳ ಜಗ್ಗಾಟ ನಡೆಯುತ್ತಿದೆ. ಅದು ಈಗ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರೆದಿದೆ. ಉಪ ಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಆರಂಭವಾಗಿದೆ. ಕಾವೇರಿ ಜಲ ನ್ಯಾಯಮಂಡಳಿ ಮುಂದೆ ನೀರಿನ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲು ವಿಫಲವಾಗಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ ಎಂದು ವಿವರಿಸಿದರು.

ಮಳೆಯ ಕೊರತೆಯ ಅರಿವಿದ್ದರೂ ಮುಂಜಾಗ್ರತೆ ಕೈಗೊಂಡಿಲ್ಲ. ವಿದ್ಯುತ್ ಕೊರತೆಯಿಂದ ನಿರಂತರ ವಿದ್ಯುತ್ ನೀಡುವಲ್ಲಿ ಸರಕಾರ ವಿಫಲವಾಗಿದೆ. ಬರ ಪರಿಸ್ಥಿತಿ ಭೀಕರವಾಗಿದ್ದು, ಸಮರೋಪಾದಿಯಲ್ಲಿ ಅದನ್ನು ನಿರ್ವಹಿಸದೆ ಕೇಂದ್ರ ಸರಕಾರವನ್ನು ಮೂದಲಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.

ಕೇಂದ್ರ ಸರಕಾರವು ಬರ ಪರಿಹಾರಕ್ಕೆ ಹಣ ನೀಡುವುದು ನಿಶ್ಚಿತ. ಈ ಹಿಂದೆ ಕೂಡ ಬರಪೀಡಿತ ಅವಧಿಯಲ್ಲಿ ರಾಜ್ಯ ಸರಕಾರ ಕೇಂದ್ರದ ಪರಿಹಾರ ಹಣಕ್ಕೆ ಕಾಯದೆ ಬರಪರಿಹಾರ ಕಾಮಗಾರಿ ನಡೆಸಲಾಗುತ್ತಿತ್ತು. ಈಗ ಸಂಪನ್ಮೂಲಗಳ ಒತ್ತಡದಲ್ಲಿರುವ ಸಿದ್ದರಾಮಯ್ಯನವರು ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬರದ ಸಮಯದಲ್ಲಿ ರಾಜಕೀಯ ಮಾಡದೇ ಕೂಡಲೇ ಪೀಡಿತರ ನೆರವಿಗೆ ಧಾವಿಸಬೇಕಾಗಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಭೇಟಿ ಕೊಡುತ್ತಿದ್ದು, ಕಾಂಗ್ರೆಸ್ ಪಾಲಿಗೆ ರಾಜ್ಯ ಸರಕಾರ ಎಟಿಎಂನಂತಾಗಿದೆ. ಕಲೆಕ್ಷನ್ ಟಾರ್ಗೆಟ್ ನೀಡಲು ರಾಜ್ಯಕ್ಕೆ ಅವರು ಭೇಟಿ ಕೊಡುತ್ತಿದ್ದಾರೆ ಎಂದು ಎಲ್ಲರಿಗೂ ಮನವರಿಕೆ ಆಗಿದೆ ಎಂದು ನುಡಿದರು.

ಎನ್‍ ಡಿಆರ್ ಎಫ್‍ ನಲ್ಲಿ ಕೇಂದ್ರ ಸರಕಾರವು ಕಳೆದ 9 ವರ್ಷಗಳಲ್ಲಿ 12,784 ಕೋಟಿ ಬಿಡುಗಡೆ ಮಾಡಿದೆ. ಎಸ್‍ ಡಿಆರ್‍ಎಫ್‍ ನಲ್ಲಿ ಕೇಂದ್ರ ಸರಕಾರವು ಕಳೆದ 9 ವರ್ಷಗಳಲ್ಲಿ 3,377 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರವು 2015ರಿಂದ 2024ರವರೆಗೆ 5.23 ಲಕ್ಷ ಕೋಟಿ ನೇರ ಅನುದಾನ ನೀಡಿದೆ ಎಂದು ವಿವರ ನೀಡಿದರು.