ವಿಜಯಪುರ (Vijayapura)-ಆಲಮಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot ) ಆಗಮನದ ಹಿನ್ನೆಲೆಯಲ್ಲಿ ಆಲಮಟ್ಟಿಯ ಉದ್ಯಾನಕ್ಕೆ ಮಂಗಳವಾರ ಮಧ್ಯಾಹ್ನದಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿತ್ತು. ಇದರಿಂದ ಪ್ರವಾಸಿಗರು ತೊಂದರೆ ಜೊತೆಗೆ ನಿರಾಶೆ ಉಂಟಾಯಿತು.
ರಾಜ್ಯಪಾಲರು ಮಂಗಳವಾರ ಸಂಜೆ ಸಂಜೆ 7.30ಕ್ಕೆ ಆಲಮಟ್ಟಿಗೆ ಆಗಮಿಸಲಿದ್ದರು. ಹೀಗಾಗಿ ಬಂದೋಬಸ್ತ್ ಗಾಗಿ ಮಧ್ಯಾಹ್ನ 3 ಗಂಟೆಯಿಂದಲೇ ಆಲಮಟ್ಟಿಯ ಉದ್ಯಾನವನ್ನು ಬಂದ್ ಮಾಡಲಾಗಿತ್ತು.
ರಾಜ್ಯದ ನಾನಾ ಕಡೆಯಿಂದ ಆಗಮಿಸಿದ್ದ ಸಾಕಷ್ಟು ಪ್ರವಾಸಿಗರು ನಿರಾಶೆಯಿಂದ ವಾಪಾಸ್ ಹೋದ ಘಟನೆ ನಡೆದಿದೆ. ಪ್ರವಾಸಿಗರಿಗೆ ರಾಜ್ಯಪಾಲರು ಬರುವ ಯಾವುದೇ ಮಾಹಿತಿಯೂ ಇರಲಿಲ್ಲ. ಉದ್ಯಾನ ಬಂದ್ ಬಗ್ಗೆಯೂ ಗೊತ್ತಿರಲಿಲ್ಲ. ಹೀಗಾಗಿ ಬೆಳಿಗ್ಗೆ ಆಗಮಿಸಿದ ಪ್ರವಾಸಿಗರು ರಾಕ್ ಉದ್ಯಾನವನ್ನಷ್ಟೇ ವೀಕ್ಷಿಸಬೇಕಾಯಿತು. ಮಧ್ಯಾಹ್ನ 2 ಗಂಟೆಯಿಂದಲೇ ಎಲ್ಲಾ ಪ್ರವಾಸಿಗರನ್ನು ರಾಕ್ ಉದ್ಯಾನದಿಂದ ಹೊರಕ್ಕೆ ಕಳುಹಿಸಲಾಯಿತು. ನಂತರ ಉದ್ಯಾನ ಬಂದ್ ಮಾಡಲಾಯಿತು. ಇದರಿಂದ ಪ್ರವಾಸಿಗರು ಪರದಾಡುವಂತಾಯಿತು.
ಬಸವನಬಾಗೇವಾಡಿ, ಸೋಲಾಪುರ, ಹುಬ್ಬಳ್ಳಿ, ಕಲಬುರ್ಗಿ ಸೇರಿ ನಾನಾ ಕಡೆಯಿಂದ ಆಗಮಿಸಿದ್ದ ಪ್ರವಾಸಿಗರು ಸಂಜೆಯ ಸಂಗೀತ ಕಾರಂಜಿ ವೀಕ್ಷಿಸದೇ ನಿರಾಶೆಯಿಂದ ಮರಳಿದ್ದಾರೆ. ಸಂಜೆ ವೇಳೆಗೆ ಲೇಸರ್, ಸಂಗೀತ ಕಾರಂಜಿ ವೀಕ್ಷಿಸಲು ನಾನಾ ಕಡೆಯಿಂದ ಆಗಮಿಸುತ್ತಿದ್ದ ನೂರಾರು ಪ್ರವಾಸಿಗರನ್ನು ಪೆಟ್ರೋಲ್ ಪಂಪ್ ಬಳಿಯೇ ತಡೆದು ಹೊರಕ್ಕೆ ಕಳುಹಿಸಲಾಯಿತು.
ಇನ್ನು ಸಂಜೆ 5 ಗಂಟೆಯಿಂದ ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಪ್ರವೇಶಿಸುವ ಮಾರ್ಗ ಹಾಗೂ ಆಲಮಟ್ಟಿ ರೈಲ್ವೆ ಸ್ಟೇಷನ್ ಕ್ರಾಸ್ ಬಳಿಯೂ ಬಂದ್ ಮಾಡಲಾಯಿತು. ಸಂಜೆ 5 ಗಂಟೆಯ ನಂತರ ಆಲಮಟ್ಟಿಯಲ್ಲಿನ ನೌಕರರ ಸಂಚಾರವನ್ನು ನಿಷೇಧಿಸಲಾಯಿತು. ಅಲ್ಲದೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಪುತ್ಥಳಿ ಬಳಿಯ ಅಂಗಡಿಗಳನ್ನು, ಅಣೆಕಟ್ಟು ವೃತ್ತ ಬಳಿಯ ವ್ಯಾಪಾರ ಮಳಿಗೆಗಳನ್ನು ಮುಚ್ಚಿಸಲಾಗಿತ್ತು.