ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟಲು ರಾಜ್ಯ ಸರ್ಕಾರ ತೀರ್ಮಾನಿಸಿ ಸುಗ್ರೀವಾಜ್ಞೆಯನ್ನು ತಯಾರಿಸಿ ರಾಜಭವನಕ್ಕೆ ಕಳುಹಿಸಿದ್ದರು. ಇದೀಗ ಸರ್ಕಾರದ ಸುಗ್ರೀವಾಜ್ಞೆಗೆ ಅಂತಿಮವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ.
ರಾಜ್ಯಪಾಲರು ಕೆಲ ದಿನಗಳ ಹಿಂದೆ ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಸಹಿ ಹಾಕದೇ ಲವು ಸಲಹೆಗಳನ್ನು ನೀಡಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದರು. ಆದರೆ ಇದೀಗ ಸುಗ್ರೀವಾಜ್ಞೆ ಜಾರಿಗೆ ಕುರಿತಂತೆ ಹಲವು ಸೂಚನೆಗಳನ್ನು ನೀಡಿರುವ ರಾಜ್ಯಪಾಲರು, ಈ ವಿಷಯದ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಸಲಹೆ ನೀಡಿದ್ದಾರೆ.
ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿ ತರಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ರಾಜ್ಯಪಾಲರು ಕೋರಿದ ವಿವರಣೆಯೊಂದಿಗೆ ಮೈಕ್ರೋ ಫೈನಾನ್ಸ್ ಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ರಾಜಭವನಕ್ಕೆ ಕಳುಹಿಸಿದ್ದರು. ಹೀಗಾಗಿ ರಾಜ್ಯಪಾಲರು ಈ ಸುಗ್ರೀವಾಜ್ಞೆಯನ್ನು ಪರಿಶೀಲಿಸಿ ಸುಗ್ರೀವಾಜ್ಞೆ ಕಡತಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಮ್ಮ ಅಂಕಿತವನ್ನು ಹಾಕಿದ್ದಾರೆ.














