ಆಲಮಟ್ಟಿ (Almatti)- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot) ಮಂಗಳವಾರ ರಾತ್ರಿ ಆಲಮಟ್ಟಿಗೆ ಭೇಟಿ ನೀಡಿ, ಆಲಮಟ್ಟಿಯ ಉದ್ಯಾನಗಳ ಸಮುಚ್ಛಯದಲ್ಲಿನ ವಿವಿಧ ಉದ್ಯಾನಗಳನ್ನು ಹಾಗೂ ಜಲಾಶಯವನ್ನು ವೀಕ್ಷಿಸಿ ಇಲ್ಲಿನ ಹಸಿರೀಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಮಾರು ಒಂದೂವರೆ ಕಿ.ಮೀ ಉದ್ಯಾನದಲ್ಲಿ ನಡೆದ ಅವರು ಪ್ರತಿ ಹೆಜ್ಜೆಗೂ ಕೆಬಿಜೆಎನ್ ಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೊಘಲ್ ಉದ್ಯಾನದ ಸ್ಥಿರ ಕಾರಂಜಿ, ಲೇಸರ್ ಫೌಂಟೇನ್‌ನಲ್ಲಿನ ಹಾಡುಗಳಿಗೆ ತಕ್ಕಂತೆ ನೀರಿನ ಪರದೆಯ ಮೇಲೆ ಮೂಡಿ ಬಂದ ಅದ್ಭುತ ಚಿತ್ರಗಳು, ಹಾಡುಗಳು, ಸಂಗೀತ ಕಾರಂಜಿಯ ವಿವಿಧ ಹಾಡುಗಳಿಗೆ ನೃತ್ಯ ಮಾಡುವ ಕಾರಂಜಿಗಳನ್ನು ವೀಕ್ಷಿಸಿದರು. ಅಂತಿಮವಾಗಿ ಎಂಟ್ರನ್ಸ್ ಪ್ಲಾಜಾ ಅಳವಡಿಸಿರುವ ತ್ರೀಡಿ ಪ್ರೊಜೆಕ್ಶನ್ ಮ್ಯಾಪಿಂಗ್ ವೀಕ್ಷಿಸಿದರು.
ಹುಬ್ಬಳ್ಳಿಯಿಂದ ರಸ್ತೆ ಮೂಲಕ ಆಲಮಟ್ಟಿ ಜಲಾಶಯದ ಬಲಭಾಗದ ಸೀತಿಮನಿ ಗುಡ್ಡದಲ್ಲಿರುವ ಕೆಎಚ್‌ಟಿಡಿಸಿ ಪ್ರವಾಸಿ ಮಂದಿರಕ್ಕೆ ಬಂದ ರಾಜ್ಯಪಾಲರು, ಅಲ್ಲಿಂದ ಆಲಮಟ್ಟಿಯ ಜಲಾಶಯದ ಮೂಲಕ ಎಡಭಾಗದ ಉದ್ಯಾನಗಳಿಗೆ ಭೇಟಿ ನೀಡಿದಾಗ ರಾತ್ರಿ 9 ಗಂಟೆ ಆಗಿತ್ತು. ಅವರಿಗಾಗಿಯೇ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಎಲ್ಲಾ ಉದ್ಯಾನ ವೀಕ್ಷಿಸಿ ಹೊರಟಾಗ ಸಮಯ 10.30 ಆಗಿತ್ತು. ರಾತ್ರಿ ಅವರು ಕೆಎಚ್‌ಟಿಡಿಸಿ ಪ್ರವಾಸಿ ಮಂದಿರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಗೆಹ್ಲೋಟ್ ಆಗಮನದ ಹಿನ್ನೆಲೆಯಲ್ಲಿ ಉದ್ಯಾನದಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮಧ್ಯಾಹ್ನದಿಂದಲೇ ಉದ್ಯಾನವನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿತ್ತು. ಮಧ್ಯಾಹ್ನದವರೆಗೆ ಮಾತ್ರ ಪ್ರವಾಸಿಗರಿಗೆ ಉದ್ಯಾನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ಧಿ ಬೆಳಿಗ್ಗೆಯಿಂದಲೇ ಆಲಮಟ್ಟಿಯಲ್ಲಿಯೇ ಇದ್ದು, ಜಲಾಶಯ, ಉದ್ಯಾನ, ಪ್ರವಾಸಿ ಮಂದಿರ ಸೇರಿ ನಾನಾ ಕಡೆ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಪರಿಶೀಲಿಸಿದ್ದರು.
ಎಸ್.ಪಿ. ಎಚ್.ಡಿ. ಆನಂದಕುಮಾರ ನೇತೃತೃತ್ವದಲ್ಲಿ, ಇಬ್ಬರು ಡಿವೈಎಸ್‌ಪಿ, ಐವರು ಸಿಪಿಐ, 10 ಪಿಎಸ್‌ಐ, 14 ಜನ ಎಎಸ್‌ಐ, 35 ಜನ ಹೆಡ್ ಕಾನ್ಸ್‌ಟೇಬಲ್, 76 ಜನ ಕಾನ್ಸ್‌ಟೇಬಲ್, 18 ಮಹಿಳಾ ಕಾನ್ಸ್‌ಟೇಬಲ್, ಎರಡು ಡಿಆರ್ ವಾಹನ, ಒಂದು ಐಆರ್‌ಬಿ ವಾಹನದ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನಿಲಕುಮಾರ್, ಎಸ್ಪಿ ಲೋಕೇಶ ಜಗಲಾಸರ, ಮುಖ್ಯ ಎಂಜಿನಿಯರ್ ಎಚ್.ಸುರೇಶ, ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಶಂಕರ, ಭದ್ರತೆಯ ಮುಖ್ಯಸ್ಥ ಸಾಬು ಥಾಮಸ್, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ ಇದ್ದರು.