ಬೆಂಗಳೂರು : ರಾಜ್ಯಪಾಲರು ವಿಶೇಷ ಅಧಿವೇಶನಕ್ಕೆ ಬರಲಿದ್ದಾರೆ ಎಂದು ಲೋಕಭವನ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂವಿಧಾನದ ವಿಧಿ 176.1 ರ ಅನ್ವಯ ಜಂಟಿ ಅಧಿವೇಶನಕ್ಕೆ ಬರಲು ರಾಜ್ಯಪಾಲರು ಒಪ್ಪಿದ್ದಾರೆ ಎಂದು ಲೋಕಭವನ ಸರ್ಕಾರಕ್ಕೆ ತಿಳಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೂ ಸಹ ಸಿಎಂ ನಿವಾಸಕ್ಕೆ ಆಗಮಿಸಿ ಅಧಿವೇಶನಕ್ಕೆ ಬರೋ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. 11 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದರೆ ರಾಜ್ಯ ಸರ್ಕಾರದ ಪೂರ್ಣ ಭಾಷಣ ಓದುತ್ತಾರಾ? ಅಥವಾ ಆಕ್ಷೇಪಾರ್ಹ ಅಂಶಗಳನ್ನ ಮೊಟಕುಗೊಳಿಸಿ ಭಾಷಣ ಓದುತ್ತಾರಾ? ಭಾಷಣ ಮಾಡದೇ ಅರ್ಧಕ್ಕೆ ತೆರಳುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಭಾರೀ ಹೈಡ್ರಾಮಾಕ್ಕೆ ಇಂದಿನ ಅಧಿವೇಶನ ಸಾಕ್ಷಿಯಾಗಲಿದೆ. ರಾಜ್ಯಪಾಲರು 11 ಅಂಶಗಳನ್ನ ತೆಗೆಯುವಂತೆ ಹೇಳಿದ್ದರು. ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ರಾಜ್ಯ ಸರ್ಕಾರ 2 ಅಂಶಗಳನ್ನಷ್ಟೇ ತೆಗೆದು ರಾಜ್ಯಪಾಲರ ಭಾಷಣ ಸಿದ್ಧಪಡಿಸಿದೆ. ವಿಧಾನಸೌಧಕ್ಕೂ ಭಾಷಣ ಪ್ರತಿ ತರಲಾಗಿದೆ.
ಸರ್ಕಾರ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರೋಧಿ ಕಠಿಣ ಶಬ್ಧಗಳನ್ನ ಬಳಸಿ ವಾಗ್ದಾಳಿ ನಡೆಸಲಾಗಿದೆ ಅನ್ನೋದು ಆರೋಪ. ಕಸಿತ ಭಾರತ್ ಜಿರಾಮ್ಜಿ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ಶಬ್ಧ ಪ್ರಯೋಗಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಭಾಷಣ ಬದಲಾವಣೆ ಮಾಡಿದರಷ್ಟೇ ನಾನು ಭಾಷಣ ಮಾಡುತ್ತೇನೆ ಎಂಬ ಸಂದೇಶ ಸರ್ಕಾರಕ್ಕೆ ಕಳುಹಿಸಿದ್ದರು.
ವಿಧಾನಸೌಧಕ್ಕೆ ರಾಜ್ಯಪಾಲರ ಆಗಮನ – ಹೂಗುಚ್ಛ ನೀಡಿ ಆತ್ಮೀಯ ಸ್ವಾಗತ ಕೋರಿದ ಸಿಎಂ – ಭಾರೀ ಹೈಡ್ರಾಮಾ ಬಳಿಕ ಕೊನೆಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನ ಸೌಧಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಇತರ ಸಚಿವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ನಗುನಗುತ್ತಲೇ ಗಣ್ಯರು ರಾಜ್ಯಪಾಲರನ್ನ ಸ್ವಾಗತಿಸಿದರು. ಬಳಿಕ ರೆಡ್ ಕಾರ್ಪೆಟ್ ಮೂಲಕ ವಿಧಾನ ಸೌಧದೊಳಗೆ ಕರೆದೊಯ್ದರು. ರಾಜ್ಯಪಾಲರು ಪೀಠದ ಬಳಿ ನಿಲ್ಲುತ್ತಿದ್ದಂತೆ, ರಾಷ್ಟ್ರಗೀತೆ ನುಡಿಸಲಾಯಿತು.
















