ಬೆಂಗಳೂರು(Bengaluru): ಬಲವಂತ ಮತ್ತು ಒತ್ತಾಯದ ಮತಾಂತರ ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಂಗಳವಾರ ಅಂಕಿತ ಹಾಕಿದ್ದಾರೆ.
2021ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ಈ ಮಸೂದೆಯನ್ನು ಮಂಡಿಸುವುದಕ್ಕೂ ಸಾಧ್ಯವಾಗಿರಲಿಲ್ಲ.
ವಿಧಾನಸಭೆಯ ಅಂಗೀಕಾರ ಪಡೆದಿರುವ ಸ್ವರೂಪದಲ್ಲೇ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಮೇ 12ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ಸಂಪುಟ ಸಭೆಯ ತೀರ್ಮಾನದಂತೆ ಸಂಸದೀಯ ವ್ಯವಹಾರಗಳು ಮತ್ತು ಕಾನೂನು ಇಲಾಖೆಯು ರವಾನಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಮಂಗಳವಾರದಿಂದಲೇ ಸುಗ್ರೀವಾಜ್ಞೆ ಜಾರಿಗೆ ಬಂದಿದೆ. ಮತಾಂತರಕ್ಕೆ ಪ್ರಚೋದನೆ ನೀಡುವವರಿಗೆ ವಿವಿಧ ಹಂತಗಳಲ್ಲಿ
ಹತ್ತು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವುದಕ್ಕೆ ಸುಗ್ರೀವಾಜ್ಞೆ ಅವಕಾಶ ಕಲ್ಪಿಸಲಿದೆ.
ಯಾವುದೇ ವ್ಯಕ್ತಿ ಮತಾಂತರಗೊಳ್ಳಲು ಬಯಸಿದಲ್ಲಿ ಕನಿಷ್ಠ ಮೂವತ್ತು ದಿನಗಳಿಗೆ ಮುಂಚಿತವಾಗಿ ತನ್ನ ಜಿಲ್ಲೆಯ ಅಥವಾ ಜನ್ಮ ಸ್ಥಳದ ಜಿಲ್ಲಾ ದಂಡಾಧಿಕಾರಿ ಅಥವಾ ಜಿಲ್ಲಾ ಅಪರ ದಂಡಾಧಿಕಾರಿ ಅವರಿಗೆ ಮಾಹಿತಿ ನೀಡಬೇಕು. ಇದನ್ನು ಆಧರಿಸಿ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.