ಬಾಗಲಕೋಟೆ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗುತ್ತಿಗೆದಾರರಿಂದ ಆರೋಪ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಅಧಿಕಾರಿಗಳ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಇಬ್ಬರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದ ಕಾರಜೋಳ, ಕೆಂಪಣ್ಣ ಬೆಂಕಿಗೆ ಬಿದ್ದಂಗಾಯ್ತು ಅಂದಿದ್ದಾರೆ. ನಮ್ಮ ಮೇಲೆ ಅವತ್ತು ಕಮಿಷನ್ ಸುಳ್ಳು ಆರೋಪ ಮಾಡಿದ್ರಿ. ಇಂದು ಅರ್ಜಿ ಕೊಟ್ಟು ಆರೋಪ ಮಾಡ್ತಿದ್ದಾರೆ. ಅಜ್ಜಯ್ಯನ ಗುಡಿಗೆ ಬಂದು ಆಣೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರೇ ಇದಕ್ಕಿಂತ ಸಾಕ್ಷ್ಯ ಬೇಕಾ..? ನೈತಿಕತೆ ಇದ್ದರೆ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕು. ಸಿಎಂ ಸಿದ್ಧರಾಮಯ್ಯ ಲೋಕಾಯುಕ್ತ ತನಿಖೆಗೆ ಆದೇಶೀಸಬೇಕು ಎಂದು ಒತ್ತಾಯಿಸಿದರು.
ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳಿಂದ ಪತ್ರ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಸಚಿವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಚಲುವರಾಯಸ್ವಾಮಿ ಆರೋಪ ಮುಕ್ತರಾಗಿ ಬನ್ನಿ ಮತ್ತೆ ಸಚಿವರಾಗಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.














