ಬೆಂಗಳೂರು (Bengaluru): ‘ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ’ ಅಭಿಯಾನದ ಅಂಗವಾಗಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರವು ನೀಡಿರುವ ಜಾಹೀರಾತು ವಿವಾದಕ್ಕೀಡಾಗಿದೆ.
ಆಗಸ್ಟ್ 14ರ ಪತ್ರಿಕೆಗಳ ಮುಖಪುಟದಲ್ಲಿ ಮಹಾತ್ಮ ಗಾಂಧಿ ಆದಿಯಾಗಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಫೋಟೊ ಮತ್ತು ಸಂಕ್ಷಿಪ್ತ ವಿವರಗಳಿರುವ ಜಾಹೀರಾತು ಪ್ರಕಟಣೆಯನ್ನು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿದೆ. ಆದರೆ ಈ ಪಟ್ಟಿಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪರಿಚಯವನ್ನು ಕೈಬಿಡಲಾಗಿದೆ. ಇದಕ್ಕೆ ನೆಹರೂ ಅನುಯಾಯಿಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಜವಾಹರಲಾಲ್ ನೆಹರೂ ಹೆಸರನ್ನು ಕೈಬಿಡುವಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು ಎಂದು ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.
ಬಿಜೆಪಿ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್‌ಅನ್ನು ಮೆಚ್ಚಿಸುವುದಕ್ಕೆ ಜಾಹೀರಾತಿನಲ್ಲಿ ನೆಹರೂ ಅವರ ಚಿತ್ರವನ್ನು ಕೈಬಿಡಲಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮೇರು ನಾಯಕ ನೆಹರೂ ಅವರ ಚಿತ್ರವನ್ನು ಕೈಬಿಡಲು ಕಾರಣವೇನು? ತಮ್ಮ ದೆಹಲಿ ದೊರೆಗಳನ್ನು ಮೆಚ್ಚಿಸಲೇ? ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಸಂಘ ಪರಿವಾರವನ್ನು ಮೆಚ್ಚಿಸಲೇ? ಕ್ಷಮೆ ಕೇಳಿದ ಸಾವರ್ಕರ್‌ಗೆ ಇರುವ ಜಾಗ ಹೋರಾಟಗಾರ ನೆಹರೂರವರಿಗೆ ಇಲ್ಲವೇಕೆ? ಅಥವಾ ದೇಶದ ಸ್ವಾತಂತ್ರದ ಬಗ್ಗೆಯೇ ಅಸಹನೆಯೇ? ಎಂದು ಟ್ವೀಟ್‌ನಲ್ಲಿ ಸಿಎಂ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ನೆಹರೂ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ, ಈ ಪರಿಯ ಗುಲಾಮಗಿರಿಗೆ ಇಳಿಯಬಾರದಿತ್ತು ಎಂದು ಸಿಎಂ ಬೊಮ್ಮಾಯಿ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪಂಡಿತ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ಎಂದಿದ್ದಾರೆ.
ಸಾರ್ವಜನಿಕರ ಹಣದಲ್ಲಿ ದ್ವೇಷ ತೀರಿಸಿಕೊಳ್ಳುವ ಚಾಳಿಯನ್ನು ಬಿಜೆಪಿ ಮುಂದುವರಿಸಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಂ. ಜವಾಹರ್‌ಲಾಲ್ ನೆಹರೂ ಅವರನ್ನು ಬ್ರಿಟಿಷರು 9 ಬಾರಿ ಬಂಧಿಸಿ 3,259 ದಿನ ಜೈಲಿನಲ್ಲಿರಿಸಿದ್ದರು. ರಾಜಕೀಯ ದುರುದ್ದೇಶದಿಂದ ನೆಹರೂ ಅವರ ಹೆಸರನ್ನು ಜಾಹೀರಾತಿನಿಂದ ಕೈ ಬಿಟ್ಟಿರುವುದು ಅಕ್ಷಮ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಹರೂ ಅವರನ್ನು ಅಪಮಾನಿಸುವ ಹಾಗೂ ಸರ್ಕಾರಿ ಜಾಹೀರಾತಿನಿಂದ ಕೈಬಿಡುವುದರಿಂದ ಇತಿಹಾಸ ಎಂದಿಗೂ ಅವರನ್ನು ಮರೆಯುವುದಿಲ್ಲ. ಆದರೆ ಚರಿತ್ರೆಯು ನಿಮ್ಮ ಸಣ್ಣತನವನ್ನು ನೆನಪಿಡುತ್ತದೆ. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಜೈಲಿನಿಂದ ಹೊರಬಂದ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾದರೆ, ನಾಲ್ಕು ಆಂಗ್ಲೋ ಮೈಸೂರು ಯುದ್ಧ ಮಾಡಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟು ಸಮರದಲ್ಲಿ ಮಡಿದ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಏಕಲ್ಲ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.