ಬೆಂಗಳೂರು: ವೇತನ ಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ನೀಡಿದ ಗಡುವು ಇಂದಿಗೆ ಅಂತ್ಯವಾಗಿದೆ.
ನೌಕರರ ಮುಷ್ಕರ ಆರಂಭಕ್ಕೆ ಮುನ್ನ ಇಂದು ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ ನೌಕರರ ವೇತನ ಪರಿಷ್ಕರಣೆ ಮಾಡಿದೆ. 2022ರ ಏಪ್ರಿಲ್ನಿಂದ ಅನ್ವಯವಾಗುವಂತೆ, ಈಗಿರುವ ವೇತನದ ಮೇಲೆ ಶೇಕಡಾ 20ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಕಾರ್ಕಳ ತಿಳಿಸಿದ್ದಾರೆ.
ಈ ಹಿನ್ನೆಲೆ ಕೆಪಿಟಿಸಿಎಲ್ ನೌಕರರು ನಾಳೆಯ ಮುಷ್ಕರನ್ನು ವಾಪಸ್ ಪಡೆದಿದ್ದಾರೆ.
ಕೆಪಿಟಿಸಿಎಲ್ ನೌಕರರ ಬೇಡಿಕೆ ಏನು?
ಪ್ರತಿ 5 ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ ಅದು ಆಗಿಲ್ಲ, ಹೀಗಾಗಿ ಈ ಕೂಡಲೇ ವೇತನ ಪರಿಷ್ಕರಣೆ ಮಾಡಬೇಕು.
ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರು ಮತ್ತು ಅಧಿಕಾರಿಗಳ ವೇತನ ಬೇಡಿಕೆ ಪರಿಷ್ಕರಣೆ ಆಗಲೇಬೇಕು. 01-04-2022 ರಿಂದ ಪೂರ್ವನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಬೇಡಿಕೆ ಇಟ್ಟಿದ್ದರು.