ಬೆಂಗಳೂರು: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಪರಿಚಯಿಸಲು ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಲಾಗಿತ್ತು. ಆಯೋಗ ಸಿದ್ಧಪಡಿಸಿರುವ ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ಸರ್ಕಾರವು ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತದೆ ಎಂದು ಹೇಳಿದರು.
ಎಲ್ಲಾ ಎಸ್ ಸಿ ಸಮುದಾಯಗಳಿಗೆ ನ್ಯಾಯ ಒದಗಿಸಲು ಒಳ ಮೀಸಲಾತಿಯನ್ನು ನ್ಯಾಯಯುತವಾಗಿ ವರ್ಗೀಕರಿಸಲಾಗುವುದು. ನಾವು ನುಡಿದಂತೆ ನಡೆದಿದ್ದೇವೆ, ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ, ಇನ್ನೊಂದು ಡಿಸೆಂಬರ್ ನಂತರ ಜಾರಿ ಮಾಡುತ್ತೇವೆ, ಇನ್ನು ಅನ್ನಭಾಗ್ಯದ ವಿಷಯದಲ್ಲಿ ಈ ತಿಂಗಳು ಹಣ ಕೊಡುತ್ತೇವೆ, ಮುಂದಿನ ತಿಂಗಳಿಂದ ಹತ್ತು ಕೆಜಿ ಅಕ್ಕಿಯನ್ನ ಕೊಡುತ್ತೇವೆ, ಒಂದು ಕೋಟಿ ಹತ್ತು ಲಕ್ಷ ಹಣವನ್ನು ಖಾತೆಗಳಿಗೆ ಹಾಕುತ್ತೇವೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುತ್ತೇವೆ ಎಂದು ತಿಳಿಸಿದರು.