ಸರ್ಕಾರಿ ನೌಕರರಿಗೆಂದೇ ಕೆಲ ನೀತಿ ಸಂಹಿತೆಗಳು ಜಾರಿಯಲ್ಲಿರುವಾಗ ಮತ್ತು ಅನೈತಿಕ ಜೀವನ ನಡೆಸದಂತೆ ನಿರ್ಬಂಧಗಳಿರುವಾಗ ಭಾರತೀಯ ಪುರಾಣಗಳಲ್ಲಿ ಸಹಜೀವನಕ್ಕೆ ಅವಕಾಶ ಇದೆ ಎಂಬ ಕಾರಣಕ್ಕೆ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಈಚೆಗೆ ಹೇಳಿದೆ.
ಅರ್ಜಿ ಸಲ್ಲಿಸಿದ್ದ ಸಿಆರ್ ಪಿಎಫ್ ನ ಪೇದೆಯೊಬ್ಬರು ಅದೇ ಪಡೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದ ವಿವಾಹಿತ ಮಹಿಳೆಯೊಂದಿಗೆ ಲಿವ್- ಇನ್ ಸಂಬಂಧ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಆದೇಶವನ್ನು ನ್ಯಾ. ಅಶೋಕ್ ಕುಮಾರ್ ಗೌರ್ ಅವರಿದ್ದ ಏಕಸದಸ್ಯ ಪೀಠ ಹಿಡಿದಿದೆ.
ಇದರೊಂದಿಗೆ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಳ್ಳಲು ಭಾರತೀಯ ಪುರಾಣಗಳನ್ನು ಉಲ್ಲೇಖಿಸಿದ ಅರ್ಜಿದಾರರ ವಾದವನ್ನು ಪೀಠ ತಿರಸ್ಕರಿಸಿದೆ. ನಿರ್ದಿಷ್ಟ ನಡವಳಿಕೆಗಳನ್ನು ನಿಯಂತ್ರಿಸುವ ನಿಯಮಾವಳಿಯ ಜೊತೆಗೆ ಸರ್ಕಾರಿ ನೌಕರ ಅನೈತಿಕ ಜೀವನ ನಡೆಸುವುದನ್ನು ನಿಷೇಧಿಸುವ ನಿಯಮಗಳಿದ್ದಾಗ ಭಾರತೀಯ ಪುರಾಣಗಳನ್ನು ಉಲ್ಲೇಖಿಸುವ ಮೂಲಕ ಆ ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಕಾನೂನು ಕ್ರೋಢೀಕೃತವಾದುದಾಗಿದ್ದು ಸರ್ಕಾರಿ ನೌಕರ ನಿರ್ದಿಷ್ಟ ನಿಯಮಾವಳಿಗಳನ್ನು ಪಾಲಿಸಬೇಕು ಎಂಬ ನಿಯಮಾವಳಿ ಇದ್ದರೆ ಅದನ್ನು ʼಬೇರೆ ದೇಶಗಳಲ್ಲಿ ರೂಢಿಯಲ್ಲಿದೆ, ಪುರಾಣಗಳಲ್ಲಿ ಚಾಲ್ತಿಯಲ್ಲಿದೆʼ ಎಂದು ಹೇಳಿ ಪರೀಕ್ಷೆಗೊಳಪಡಿಸಬಾರದು” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಮಹೇಶ್ ಚಂದ್ ಶರ್ಮಾ ವಿರುದ್ಧ ರಾಜಸ್ಥಾನ ಸರ್ಕಾರ ನಡುವಣ ಪ್ರಕರಣದಲ್ಲಿನ ತೀರ್ಪಿಗೂ ಈ ಪ್ರಕರಣಕ್ಕೂ ವ್ಯತ್ಯಾಸವಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿ ಹೈಕೋರ್ಟ್ ಸಮನ್ವಯ ಪೀಠ ಭಾರತೀಯ ಪುರಾಣಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಸಂಪ್ರದಾಯಗಳನ್ನು ಉಲ್ಲೇಖಿಸಿತ್ತು.
ಪ್ರಸ್ತುತ ಪ್ರಕರಣದ ವಾದಗಳಿಗೆ ತಾರ್ಕಿಕತೆಯ ಕೊರತೆ ಇದ್ದು ಈ ವಾದಗಳನ್ನು ನ್ಯಾಯಶಾಸ್ತ್ರ ಬೆಂಬಲಿಸುವುದಿಲ್ಲ ಎಂದು ಹೈಕೋರ್ಟ್ ತಿಳಿಸಿತು. ಈ ಅವಲೋಕನಗಳೊಂದಿಗೆ, ಪೀಠ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸಿದ್ದ ಪೊಲೀಸ್ ಇಲಾಖೆಯ ಕ್ರಮವನ್ನು ಅದು ಎತ್ತಿಹಿಡಿಯಿತು.