ಬೆಂಗಳೂರು: ಸರ್ಕಾರಿ ನೌಕರರ ಸರಿ ಸಮಾನ ವೇತನಕ್ಕೆ ಆಗ್ರಹಿಸಿ ಮಾರ್ಚ್ 24ರಂದು ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ರಾಜ್ಯದಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಮುಷ್ಕರದಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲ ಮುಷ್ಕರ ನಡೆಸದಂತೆ ಹೈಕೋರ್ಟ್ ಸಾರಿಗೆ ನೌಕರರ ಸಂಘಕ್ಕೆ ನಿರ್ದೇಶಿಸಿದೆ.
ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆಯು, ಮುಷ್ಕರವನ್ನು ಪ್ರಶ್ನಿಸಿ ಎಚ್.ಎಂ.ವೆಂಕಟೇಶ್ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಮುಷ್ಕರ ನಡೆಸದಂತೆ ತಡೆ ನೀಡಿದೆ.
“ಪ್ರಸ್ತುತ ನೀಡಿರುವ ವೇತನ ಪರಿಷ್ಕರಣೆಗೆ ಯಾವುದೇ ರೀತಿಯಿಂದಲೂ ನಮ್ಮ ಸಮ್ಮತಿ ಇಲ್ಲ. ಮಾರ್ಚ್ 24ರಿಂದ ನಡೆಯಲಿರುವ ಸಾರಿಗೆ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಡಿಕೆ ಈಡೇರುವವರೆಗೂ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ. ಅದಕ್ಕೆ ಪೂರ್ವಭಾವಿಯಾಗಿ ಈ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಇಲ್ಲಿ ಯಾವ ತ್ಯಾಗಕ್ಕೂ ನಾವು ಸಿದ್ಧ’ ಎಂದು ಚಂದ್ರಶೇಖರ್ ತಿಳಿಸಿದ್ದರು.