ಮನೆ ರಾಜ್ಯ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ ಅಳವಡಿಸಲು ಸರ್ಕಾರದಿಂದ ಚಿಂತನೆ

ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ ಅಳವಡಿಸಲು ಸರ್ಕಾರದಿಂದ ಚಿಂತನೆ

0

ಬೆಂಗಳೂರು  (Bengaluru)- ಪಿಎಸ್‌ಐ ನೇಮಕ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮವಾಗಿರುವುದು ಬಯಲಾಗುತ್ತಿರುವ ಬೆನ್ನಲ್ಲೇ ನಾನಾ ಹುದ್ದೆ ನೇಮಕಕ್ಕೆ ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಜಾಮರ್‌ ಅಳವಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಸ್ಪಷ್ಟ ಸೂಚನೆ ರವಾನೆಯಾಗಿದೆ. ನೇಮಕ ಪರೀಕ್ಷೆಗಳಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿ ನಡೆಸುವ ಅಕ್ರಮಗಳ ತಡೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಸಿಎಂ ಕಚೇರಿ ಸೂಚನೆ ನೀಡಿದೆ.

ನಾನಾ ಹುದ್ದೆ ನೇಮಕಕ್ಕೆ ನಡೆಯುವ ಪರೀಕ್ಷೆಗಳನ್ನು ಅಕ್ರಮವಿಲ್ಲದಂತೆ ಪಾರದರ್ಶಕವಾಗಿ ನಡೆಸಲು ಸುಧಾರಿತ ಉಪಕರಣಗಳು, ಇಂಟರ್‌ನೆಟ್‌, ಬ್ಲೂಟೂಥ್‌ ಇತರ ಉಪಕರಣ ಬಳಸಿ ಅಕ್ರಮ ನಡೆಸದಂತೆ ತಡೆಯಲು ಇಡೀ ಪರೀಕ್ಷಾ ಕೇಂದ್ರದಲ್ಲಿ ಜಾಮರ್‌ ಅಳವಡಿಕೆಗೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಮುಂದಿನ ನೇಮಕ ಪರೀಕ್ಷೆಗಳಲ್ಲಿ ಇನ್ನಷ್ಟು ಪಾರದರ್ಶಕ ವ್ಯವಸ್ಥೆ ರೂಪುಗೊಳ್ಳುವ ನಿರೀಕ್ಷೆ ಮೂಡಿದೆ.

ಒಟ್ಟು 545 ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ನೇಮಕಕ್ಕೆ ಇತ್ತೀಚೆಗೆ ಪರೀಕ್ಷೆ ನಡೆದು ಅಂತಿಮ ಪಟ್ಟಿಯೂ ಪ್ರಕಟವಾಗಿತ್ತು. ಆದರೆ ಪರೀಕ್ಷಾ ಅಕ್ರಮದ ಜತೆಗೆ ನೇಮಕ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿರುವುದು ಕ್ರಮೇಣ ಬೆಳಕಿಗೆ ಬಂದಿತ್ತು. ಮುಖ್ಯವಾಗಿ ಅತ್ಯಾಧುನಿಕ ‘ಬ್ಲೂಟೂಥ್‌’ ಉಪಕರಣಗಳನ್ನು ಬಳಸಿ ಅಕ್ರಮ ನಡೆಸಿರುವುದು ಬಯಲಾಗಿತ್ತು. ಸುಲಭ ನೋಟಕ್ಕೆ ಗುರುತಿಸಲಾಗದಷ್ಟು ಸೂಕ್ಷ್ಮ ಉಪಕರಣಗಳನ್ನು ಬಳಸಿ ಪ್ರಶ್ನೆಗಳಿಗೆ ಉತ್ತರ ವಿವರ ಪಡೆದು ದಾಖಲಿಸುವ ಮೂಲಕ ಹೆಚ್ಚು ಅಂಕಗಳಿಸಿ ಹುದ್ದೆ ಗಿಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು.