ಮೈಸೂರು: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ. ಗಾಯಿತ್ರಿ ಅವರು ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ ಗ್ರಾಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಕೆರೆ ಅಭಿವೃದ್ಧಿ, ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಗೊಂಡು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ಮ-ನರೇಗಾ ಅಕುಶಲ ಕೂಲಿಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜಿಸುವಂತೆ ತಿಳಿಸಿದರು. ಅಮೃತ ಗ್ರಾಮ ಪಂಚಾಯಿತಿ ಯೋಜನೆಯನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮ-ನರೇಗಾ ಯೋಜನೆ, ತೆರಿಗೆ ಪಾವತಿ ಸೇರಿದಂತೆ ಇತರೆ ಯೋಜನೆಗಳ ಕುರಿತು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ರಾಜರಾಮ್ ಅವರೊಂದಿಗೆ ಜಲಜೀವನ್ ಮಿಷನ್ ಹಾಗೂ ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲಿಸಿದರು. ಎಫ್.ಟಿ.ಕೆ ಕಿಟ್ ಗಳನ್ನು ಬಳಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಪರೀಕ್ಷೆ ನಡೆಸಿ. ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ, ಶಾಲಾ ಮತ್ತು ಅಂಗನವಾಡಿ ಶೌಚಾಲಯ ನಿರ್ಮಾಣ, ಬೂದು ನೀರು ಕಾಮಗಾರಿಯ ವೈಯಕ್ತಿಕ ಇಂಗು ಗುಂಡಿ, ಒಳಚರಂಡಿ ಸಂಸ್ಕರಣಾ ವಿಧಾನ (Inline treatment), ಹಸಿ ಮತ್ತು ಒಣ ಕಸ ನಿರ್ವಹಣೆಯ ಬಗ್ಗೆ ಘಟಕವನ್ನು ತರಬೇತಿ ಪಡೆದ ಜಿಪಿಎಲ್ ಎಫ್ ಸದಸ್ಯರಿಗೆ ಹಸ್ತಾಂತರಿಸುವ ಬಗ್ಗೆ ಮಾಹಿತಿ ನೀಡಿದರು, ಮನೆ ಹಂತದಲ್ಲಿ ಮತ್ತು ಸಮುದಾಯ ಹಂತದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದು ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಿಡಿಓ ಗೆ ಸೂಚಿಸಿದರು.
ಗ್ರಂಥಾಲಯಕ್ಕೆ ಮಕ್ಕಳ, ಮಹಿಳೆಯರ, ನಾಗರೀಕರ ಹಾಗೂ SHG ಸಂಘದ ಮಹಿಳೆಯರನ್ನು ನೊಂದಣಿ ಮಾಡಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗ್ರಂಥಪಾಲಕರಿಗೆ ಸೂಚಿಸಲಾಯಿತು.
ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಉತ್ಪನ್ನಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಾರಾಟ ಮಾಡುವಂತೆ ಕ್ರಮವಹಿಸಿ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸ್ವ ಸಹಾಯ ಸಂಘದ ಸದಸ್ಯರಿಗೆ ಸೂಚನೆ ನೀಡಿದರು. ಬಳಿಕ ಬಾಕಿ ವೇತನ, ಶೌಚಾಲಯ ನಿರ್ಮಾಣ, ವೈಯಕ್ತಿಕ ಕಾಮಗಾರಿಗಳ ಬಾಕಿ, ಸಾಮಾಗ್ರಿ ಮೊತ್ತ ಸೇರಿದಂತೆ ಸಂಬಂಧಪಟ್ಟಂತೆ ಹಲವು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಅವರು, ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲೂರು ಹೊಸ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಳೆಗಾಲ ಇರುವುದರಿಂದ ಸಾರ್ವಜನಿಕರು ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಅಂಗನವಾಡಿ, ಶಾಲಾ, ಕಾಲೇಜು, ಸಮುದಾಯ ಶೌಚಾಲಯಗಳನ್ನು ಶುಚಿಯಾಗಿರಿಸುವಂತೆ ಸೂಚನೆ ನೀಡಿದರು. ಬಳಿಕ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗಳಿಗೂ ಅಳವಡಿಸಿರುವ ನಳಸಂಪರ್ಕ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಕೆ ಸತೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೀಪ್, ಮ-ನರೇಗಾ ಸಹಾಯಕ ನಿರ್ದೇಶಕಿ ನೇತ್ರಾವತಿ ಸೇರಿದಂತೆ ಇತರರು ಹಾಜರಿದ್ದರು.