ಮನೆ ಸುದ್ದಿ ಜಾಲ ಹಾಸನದಲ್ಲಿ ಹೃದಯಾಘಾತದಿಂದ ಪದವಿ ವಿದ್ಯಾರ್ಥಿನಿ ಸಾವು

ಹಾಸನದಲ್ಲಿ ಹೃದಯಾಘಾತದಿಂದ ಪದವಿ ವಿದ್ಯಾರ್ಥಿನಿ ಸಾವು

0

ಹಾಸನ: ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ಕೇವಲ 21 ವರ್ಷದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ ದುಃಖದ ಘಟನೆ ವರದಿಯಾಗಿದೆ. ಮೃತ ವಿದ್ಯಾರ್ಥಿನಿಯನ್ನು ಕವನ ಕೆ.ವಿ. ಎಂದು ಗುರುತಿಸಲಾಗಿದೆ.

ಕವನ, ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿಯ ಮಗಳಾಗಿದ್ದು, ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗಷ್ಟೇ ಮೂರು ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದ ಕವನ, ಇನ್ನೂ ಮೂರು ವಿಷಯಗಳ ಪರೀಕ್ಷೆಗಳನ್ನು ಬರೆಯಬೇಕಿತ್ತು. ಸದಾ ನಗುಮುಖಿಯಾದ, ಸ್ನೇಹಪರವಾಗಿ ನಡೆದುಕೊಂಡು ಎಲ್ಲರ ಮನಸ್ಸು ಗೆದ್ದಿದ್ದ ಕವನ, ತನ್ನ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಂಡಿದ್ದಳು.

ದಿನದ ನಿತ್ಯದ ಕಾರ್ಯಗಳಲ್ಲಿ ತೊಡಗಿದ್ದ ಕವನ, ಸಂಜೆ ಮನೆಗೆ ನೀರು ತಂದ ನಂತರ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ತಾಯಿಯ ಬಳಿ ನೀರು ಕೇಳಿದಳು. ತಾಯಿ ನೀರು ತಂದು ಕೊಡುವಷ್ಟರಲ್ಲಿ, ಆಕೆ ಮನೆಯಲ್ಲಿಯೇ ಕುಸಿದು ಬಿದ್ದಳು. ತಕ್ಷಣ ಗಂಭೀರ ಪರಿಸ್ಥಿತಿಯನ್ನು ಅರಿತ ಪೋಷಕರು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ವೈದ್ಯರು ಆಕೆ ಮೃತಪಟ್ಟಿರುವುದುದಾಗಿ ಘೋಷಿಸಿದರು.

ಆಕಸ್ಮಿಕವಾಗಿ ಮಗಳನ್ನು ಕಳೆದುಕೊಂಡ ಪೋಷಕರಿಗೆ ಈ ಆಘಾತ ಸಹಿಸಲಾಗದ ಸ್ಥಿತಿಯಾಗಿದೆ. ತಾಯಿ ಗಾಯತ್ರಿ ಹಾಗೂ ತಂದೆ ಪಾಪಣ್ಣನ ಆಕ್ರಂದನದಿಂದ ಕೆಲವತ್ತಿ ಗ್ರಾಮದಲ್ಲಿ ತೀವ್ರ ಸಂತಾಪದ ವಾತಾವರಣ ಮೂಡಿದೆ. ಮನೆಯವರು, ಬಂಧುಮಿತ್ರರು ಮಾತ್ರವಲ್ಲದೆ, ಕಾಲೇಜಿನ ಸಹಪಾಠಿಗಳು ಹಾಗೂ ಉಪನ್ಯಾಸಕ ವರ್ಗದವರಲ್ಲೂ ಶೋಕದ ಛಾಯೆ ಆವರಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ವೈದ್ಯಕೀಯ ವರದಿಯ ಪ್ರಕಾರ, ತೀವ್ರ ಹೃದಯಾಘಾತವೇ ಕವನ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಯುವ ಜನರಲ್ಲಿ ಹೃದಯಾಘಾತದ ಸಂಭವ ಹೆಚ್ಚುತ್ತಿರುವುದಕ್ಕೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.