ಪಿರಿಯಾಪಟ್ಟಣ (Periyapatana)- ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರರು ಬಿಜೆಪಿಯತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರ ಸಭೆ ನಡೆಸಿದ ಕಡೆಯಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ರವಿಶಂಕರ್ ಗೆಲುವು ನಿಶ್ಚಿತ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ (S.T.Somashekar) ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ನಾನಾ ಕಡೆ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಪದವೀಧರರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿರುವ ರವಿಶಂಕರ್ ಅವರು ಸರ್ಕಾರದ ಗಮನಕ್ಕೆ ತಂದು ಅದನ್ನು ಪರಿಹರಿಸಲು ಯತ್ನಿಸುತ್ತಾರೆ ಎಂದರು.
ರವಿಶಂಕರ್ ಯಾವುದೇ ಉದ್ಯಮಿಯಲ್ಲ. ಸಂಘಟನೆಯಿಂದ ಬಂದವರು. ಅವರಿಗೆ ಜನಸಾಮಾನ್ಯರ ಕಷ್ಟಸುಖದ ಅರಿವಿದೆ. ಕಳೆದ ಬಾರಿ 160 ಮತಗಳಲ್ಲಿ ಸೋತರೂ ಮನೆಯಲ್ಲಿ ಕೂರದೆ ಕಳೆದ ಆರು ವರ್ಷದಿಂದ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಸಾರ್ವಜನಿಕರು, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎಂದರು.
ಪಿರಿಯಾಪಟ್ಟಣದಲ್ಲಿ 2700 ಪದವೀಧರರ ನೋಂದಣಿಯಾಗಿದೆ. ಇದರಲ್ಲಿ 1500 ಪದವೀಧರರನ್ನು ಖುದ್ದು ಭೇಟಿ ಮಾಡಲಾಗಿದೆ. ಇನ್ನೆರಡು ಮೂರು ದಿನದಲ್ಲಿ ಉಳಿದವರನ್ನು ಭೇಟಿ ಮಾಡಲಾಗುತ್ತದೆ ಎಂದು ಹೇಳಿದರು.
ಕಳೆದ ಎರಡು ವರ್ಷದಿಂದ ನೇಮಕಾತಿ ಆಗಲಿಲ್ಲ. ಆದರೀಗ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ನೇಮಕಾತಿ ಆರಂಭಿಸಲಾಗಿದೆ. ಸದ್ಯದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ ಎಂದರು.
ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾಜಿ ಸಚಿವ ವಿಜಯ್ ಶಂಕರ್ ಜೊತೆಯಲ್ಲಿದ್ದರು.