ಮನೆ ಅಪರಾಧ ಮೊಮ್ಮಗನಿಂದಲೇ ಅಜ್ಜಿಯ ಹತ್ಯೆ: 5 ವರ್ಷಗಳ ಬಳಿಕ ತಾಯಿ ಮಗನ ಬಂಧನ

ಮೊಮ್ಮಗನಿಂದಲೇ ಅಜ್ಜಿಯ ಹತ್ಯೆ: 5 ವರ್ಷಗಳ ಬಳಿಕ ತಾಯಿ ಮಗನ ಬಂಧನ

0

ಬೆಂಗಳೂರು(Bengaluru): ಗೋಬಿ ಮಂಚೂರಿ ತಿನ್ನಲು ನಿರಾಕರಿಸಿದ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ತಾಯಿ, ಮಗನನ್ನು ಬಂಧಿಸಿದ್ದಾರೆ.

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಪ್ರಕರಣ ಇದಾಗಿದ್ದು, ಶಾಂತಕುಮಾರಿ (70) ಮೃತ ದುರ್ದೈವಿ. ಮೃತರ ಮಗಳು ರಾಧಾ ಶ್ರೀವಾಸುದೇವ್ ರಾವ್ ಅಲಿಯಾಸ್ ಶಶಿಕಲಾ (50) ಹಾಗೂ ಮೊಮ್ಮಗ ಸಂಜಯ್ (27) ಅವರನ್ನು ಬಂಧಿತ ಆರೋಪಿಗಳು.

ಕೆಂಗೇರಿ ಉಪನಗರ 7ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ ರಾಧಾ ಹಾಗೂ ಅವರ ಮಗ ಸಂಜಯ್, ಶಾಂತಕುಮಾರಿ ಅವರನ್ನು ಕೊಂದು ಪರಾರಿಯಾಗಿದ್ದರು. ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರನ್ನೂ ಮಹಾರಾಷ್ಟ್ರದ ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ ? : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಧಾ ಅವರ ಪತಿ ತೀರಿಕೊಂಡಿದ್ದರು. ಮಗ ಸಂಜಯ್ ಹಾಗೂ ತಾಯಿ ಶಾಂತಕುಮಾರಿ ಜೊತೆ ಬೆಂಗಳೂರಿಗೆ ಬಂದಿದ್ದರು. ಕೆಂಗೇರಿ ಉಪನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಜಯ್, ಇಂದಿರಾನಗರದ ರಿಯಲ್ ಎಸ್ಟೇಟ್ ಕಚೇರಿಯೊಂದರಲ್ಲಿ ಅರೆಕಾಲಿಕ ಕೆಲಸ ಸಹ ಮಾಡುತ್ತಿದ್ದರು  ಎಂದು ತಿಳಿಸಿದರು.

ಧಾರ್ಮಿಕ ಆಚರಣೆಗೆ ಒತ್ತು ನೀಡುತ್ತಿದ್ದ ಶಾಂತಕುಮಾರಿ, ಮಡಿವಂತಿಕೆ ಪಾಲಿಸುತ್ತಿದ್ದರು. ಇದು ರಾಧಾ ಹಾಗೂ ಸಂಜಯ್‌ಗೆ ಆಗುತ್ತಿರಲಿಲ್ಲ. ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಸಂಜಯ್, ಅಜ್ಜಿಗೆ ತಿನ್ನಿಸಲೆಂದು ಗೋಬಿ ಮಂಚೂರಿ ತಂದಿದ್ದ. ಅದನ್ನು ತಿನ್ನಲು ನಿರಾಕರಿಸಿದ್ದ ಶಾಂತಕುಮಾರಿ, ಸಂಜಯ್‌ ಮುಖಕ್ಕೆ ಬಿಸಾಕಿ ಬೈದಿದ್ದರು.

ಇದರಿಂದ ಅಜ್ಜಿ ಶಾಂತಕುಮಾರಿ ಮೇಲೆ ಕೋಪಗೊಂಡಿದ್ದ ಸಂಜಯ್, ಲಟ್ಟಣಿಗೆಯಿಂದ ತಲೆ ಹಾಗೂ ಹಣೆಗೆ ಹೊಡೆದಿದ್ದ. ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಶಾಂತಕುಮಾರಿ, ಮೂರು ದಿನಗಳ ನಂತರ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ಸಂಗತಿ ಹೊರಗೆ ಗೊತ್ತಾದರೆ ಕೊಲೆ ಪ್ರಕರಣದಲ್ಲಿ ಮಗ ಸಂಜಯ್ ಜೈಲಿಗೆ ಹೋಗಬಹುದೆಂದು ರಾಧಾ ಹೆದರಿದ್ದರು. ಹೀಗಾಗಿ, ಎರಡು ದಿನ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಮನೆಯ ಗೋಡೆಯ ಕಪಾಟಿನೊಳಗೆ ಮೃತದೇಹ ಇರಿಸಿದ್ದ ಆರೋಪಿಗಳು, ಅದರ ಬಾಗಿಲು ಮುಚ್ಚಿದ್ದರು. ನಂತರ, ಕಪಾಟಿನ ಸುತ್ತಲೂ ಕೆಮ್ಮಣ್ಣು ಹಾಗೂ ಸಿಮೆಂಟ್‌ನಿಂದ ಪ್ಲಾಸ್ಟಿಂಗ್ ಮಾಡಿದ್ದರು. ಬಣ್ಣ ಬಳೆದಿದ್ದರು. ಇದಾದ ನಂತರ, ನಾಲ್ಕು ತಿಂಗಳು ಅದೇ ಮನೆಯಲ್ಲಿ ವಾಸವಿದ್ದರು. ಶಾಂತಕುಮಾರಿ ಮೃತಪಟ್ಟ ಬಗ್ಗೆ ಅಕ್ಕ–ಪಕ್ಕದವರಿಗೆ ಯಾವುದೇ ಅನುಮಾನ ಬಂದಿರಲಿಲ್ಲ .

ಬಂಧನ ಭೀತಿಯಲ್ಲೇ ಇದ್ದ ರಾಧಾ ಹಾಗೂ ಸಂಜಯ್, ನಗರ ತೊರೆಯಲು ಮುಂದಾಗಿದ್ದರು. ಸಾಗರದಲ್ಲಿರುವ ಅಜ್ಜ ಆರೋಗ್ಯ ಸರಿ ಇಲ್ಲವೆಂದು ಮನೆ ಮಾಲೀಕನಿಗೆ ಹೇಳಿ ಆರೋಪಿಗಳು ಪರಾರಿಯಾಗಿದ್ದರು. ಕೊಲ್ಲಾಪುರಕ್ಕೆ ಹೋಗಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಲವು ದಿನವಾದರೂ ಆರೋಪಿಗಳು ವಾಪಸು ಬಂದಿರಲಿಲ್ಲ. ಹೀಗಾಗಿ, ಮಾಲೀಕರು ಮನೆ ಬಾಗಿಲು ತೆಗೆದಿದ್ದರು. ಕಪಾಟಿಗೆ ಪ್ಲಾಸ್ಟಿಂಗ್ ಮಾಡಿದ್ದನ್ನು ಗಮನಿಸಿದ್ದರು. ರಕ್ತಸಿಕ್ತ ಬಟ್ಟೆಗಳೂ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದವು. ಅನುಮಾನಗೊಂಡು ಠಾಣೆಗೆ ಮಾಹಿತಿ ನೀಡಿದ್ದರು ಎಂದು ಹೇಳಿವೆ.

ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಸಂಜಯ್ ಮೊಬೈಲ್ ಸಿಕ್ಕಿತ್ತು. ಮೃತದೇಹ ವಿಲೇವಾರಿ ಬಗ್ಗೆ ಸ್ನೇಹಿತ ಎ.ಎಸ್. ನಂದೀಶ್‌ ಜೊತೆ ಸಂಜಯ್ ಮಾತನಾಡಿದ್ದ ಸಂಗತಿ ಕರೆ ವಿವರದಿಂದ ತಿಳಿಯಿತು. ನಂತರ, ನಂದೀಶ್‌ನನ್ನು 2017ರಲ್ಲೇ ಬಂಧಿಸಲಾಗಿತ್ತು. ಆತನೇ ಬಳಿಕ ಕೊಲೆ ರಹಸ್ಯ ಬಹಿರಂಗಪಡಿಸಿದ್ದ ಎಂದೂ ತಿಳಿಸಿವೆ.

ಹಿಂದಿನ ಲೇಖನಸುಳೇಭಾವಿ ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣ: ಇಬ್ಬರು ಪೊಲೀಸರ ಅಮಾನತು
ಮುಂದಿನ ಲೇಖನಸಂಧಾನ ಸಭೆ ಯಶಸ್ವಿ: ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ವಾರದೊಳಗೆ ವೇತನ