ಗ್ವಾಲಿಯಾರ್(ಮಧ್ಯ ಪ್ರದೇಶ): ಆಗ ತಾನೇ ಹುಟ್ಟಿದ ಮೊಮ್ಮಗಳು ದಿವ್ಯಾಂಗಳಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ನವಜಾತ ಶಿಶುವನ್ನೇ ಉಸಿರುಗಟ್ಟಿಸಿ ಕೊಂದು ಹಾಕಿದ 54 ವರ್ಷದ ಮಹಿಳೆಗೆ ಗ್ವಾಲಿಯರ್ನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರೇಮಲತಾ ಚೌಹಾಣ್ ಶಿಕ್ಷೆಗೊಳಗಾದ ಅಪರಾಧಿ.
“ಮಕ್ಕಳ ಮೇಲಿನ ಈ ರೀತಿಯ ಅಪರಾಧಗಳನ್ನು ಸಮಾಜದಲ್ಲಿ ಸಹಿಸಲು ಸಾಧ್ಯವಿಲ್ಲ. ಹೀನ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಕರುಣೆ ತೋರುವುದಿಲ್ಲ” ಎಂದು ಕೋರ್ಟ್ ತಿಳಿಸಿದೆ. ಪ್ರೇಮಲತಾ ಕಳೆದ ಏಪ್ರಿಲ್ನಿಂದ ಜೈಲಿನಲ್ಲಿದ್ದಾರೆ.
ಘಟನೆಯ ವಿವರ: ಈ ವರ್ಷಾರಂಭದಲ್ಲಿ ಘಟನೆ ನಡೆದಿದೆ. ಪ್ರೇಮಲತಾ ಅವರ ಸೊಸೆ ಕಾಜಲ್ ಚೌಹಾಣ್ ಮಾರ್ಚ್ 23ರಂದು ಕಮಲ ರಾಜ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಎಡಗೈ ಊನವಾಗಿದ್ದು, ಮೊಣಕೈ ಕೆಳಭಾಗದ ಬೆಳವಣಿಗೆ ಇರಲಿಲ್ಲ. ಪ್ರೇಮಲತಾ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಹೆಣ್ಣುಮಗುವಿನ ಆಗಮನವನ್ನು ಸ್ವೀಕರಿಸಲು ಆಕೆ ಸಿದ್ಧಳಾಗಿರಲಿಲ್ಲ.
ಮಾರ್ಚ್ 26ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರೇಮಲತಾ, ಮಗುವನ್ನು ಮಲಗಿಸುವುದಾಗಿ ಹೇಳಿ ತಾಯಿಯಿಂದ ಪಡೆದಿದ್ದಾಳೆ. ಬಳಿಕ ಹೊದಿಕೆಯಿಂದ ಬಿಗಿಯಾಗಿ ಸುತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮಗುವಿನ ಕುತ್ತಿಗೆಯಲ್ಲಿ ಗಾಯದ ಕಲೆಗಳಿದ್ದವು. ಈ ಕುರಿತು ಕಾಜಲ್ ಕುಟುಂಬಸ್ಥರಿಗೆ ತಿಳಿಸಿದ್ದು, ಕಂಪೂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಪ್ರೇಮಲತಾ ಮೇಲೆ ಅನುಮಾನ ಮೂಡಿತ್ತು. ಆರಂಭದಲ್ಲಿ ಪೊಲೀಸರ ತನಿಖೆಯಲ್ಲಿ ಅಪರಾಧ ಎಸಗಿದ್ದರ ಕುರಿತು ಆಕೆ ನಿರಾಕರಿಸಿದ್ದಳು. ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.