ಮೈಸೂರು(Mysuru): ಔಷಧ ಸಸ್ಯಗಳಿಗೆ ಉತ್ತಮ ವಾತಾವರಣ ನಿರ್ಮಿಸಬೇಕಾಗಿದೆ. ಔಷಧಿ ಸಸ್ಯಗಳಿಂದ ಹೆಚ್ಚಿನ ಪ್ರಯೋಜನ ಇದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಮತ್ತು ಸಸ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಮೂರನೇ ವಿಭಾಗೀಯ ಸಮನ್ವಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕಾ ಕ್ರಾಂತಿಯ ಪರಿಣಾಮ ಇಂದು ಹೆಚ್ಚಿನ ಸಸ್ಯಗಳು ಬೆಳೆಯಲು ಉತ್ತಮ ವಾತಾವರಣ ಇಲ್ಲವಾಗಿದೆ. ಔಷಧ ಸಸ್ಯಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದು ಹೇಳಿದರು.
ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಮಾತನಾಡಿ, ಸಸ್ಯಗಳ ಸಂರಕ್ಷಣೆಗೆ ಅಧ್ಯಯನ ಮಾಡಲು ಅಥವಾ ಕಾರ್ಯಕ್ರಮ ಆಯೋಜಿಸಲು ವಿವಿಗಳಲ್ಲಿ ಫಂಡ್ ಇಲ್ಲವಾಗಿದೆ. ಹಾಗಾಗಿ ಸರಕಾರದಿಂದ ಇದಕ್ಕೆ ಹೆಚ್ಚಿನ ನಿಧಿ ಸಿಗಬೇಕು ಎಂದು ಆಶಿಸಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಹಳ್ಳಿ ವಾತಾವರಣದಲ್ಲಿ ಬೆಳೆದರೆ ಔಷಧೀಯ ಗುಣ ಇರುವ ಸಸ್ಯಗಳ ಪರಿಯಚ ಆಗುತ್ತದೆ. ಆದರೆ, ಈಗಿನ ಪೀಳಿಗೆಗೆ ಅವುಗಳ ಪರಿಚಯವೇ ಇಲ್ಲವಾಗಿದೆ. ಪಟ್ಟಣದ ಮಕ್ಕಳಿಗೆ ಯಾವ ಗಿಡ ಯಾವ ಹಣ್ಣು ನೀಡುತ್ತದೆ, ಹೇಗೆ ಬೆಳೆಯುತ್ತದೆ ಎಂಬ ಮಾಹಿತಿಯೇ ಇರುವುದಿಲ್ಲ ಎಂದು ಹೇಳಿದರು.
ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಕೆ. ಎನ್. ಅಮೃತೇಶ್ ಮಾತನಾಡಿ, ನಮ್ಮ ಸುತ್ತಮುತ್ತ ನಮಗೆ ಗೊತ್ತಿಲ್ಲದೆ ಇರುವ ಔಷಧೀಯ ಗುಣ ಇರುವ ನೂರಾರು ಪ್ರಬೇಧದ ಸಸ್ಯಗಳಿವೆ. ಅವುಗಳ ಬಗ್ಗೆ ಡಾಟಾ ಸಂಗ್ರಹ ಮಾಡುವ ಕೆಲಸ ಆಗಿಲ್ಲ. ಅದು ತುರ್ತಾಗಿ ಆಗಬೇಕಿದೆ ಎಂದು ಆಶಿಸಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತ ಎಸ್ ಅರೇಕಲ್, ಸುದರ್ಶನ್ ಜಿ.ಎ., ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ ಸೇರಿದಂತೆ ಇತರರು ಇದ್ದರು.