ಮನೆ ರಾಜ್ಯ ಗ್ರೇಟರ್ ಬೆಂಗಳೂರು: ರಾಜ್ಯಪಾಲರಿಂದ ಮಸೂದೆ ವಾಪಸ್

ಗ್ರೇಟರ್ ಬೆಂಗಳೂರು: ರಾಜ್ಯಪಾಲರಿಂದ ಮಸೂದೆ ವಾಪಸ್

0

ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕಾರವಾದ ಗ್ರೇಟರ್ ಬೆಂಗಳೂರು ಮಸೂದೆ ಬಗ್ಗೆ ಸ್ಪಷ್ಟೀಕರ ಕೇಳಿ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.

ಬಿಜೆಪಿಯ ವಿರೋಧದ ಹೊರತಾಗಿಯೂ ಅಂಗೀಕರಿಸಲಾದ ಈ ಮಸೂದೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅನ್ನು ಗ್ರೇಟರ್ ಬೆಂಗಳೂರು ಪ್ರದೇಶದಡಿ ಏಳು ಮಹಾನಗರ ಪಾಲಿಕೆಗಳಾಗಿ ವಿಭಜಿಸುತ್ತದೆ. ರಾಜ್ಯಪಾಲರು ಕೆಲವು ಸ್ಪಷ್ಟೀಕರಣಗಳನ್ನು ಕೇಳಿ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಅನುಮೋದನೆಗಾಗಿ ಸ್ಪಷ್ಟೀಕರಣಗಳೊಂದಿಗೆ ಮಸೂದೆ ಮತ್ತೆ ರಾಜ್ಯಪಾಲರಿಗೆ ಕಳುಹಿಸಲಾಗುವುದು’ ಎಂದು ಪಾಟೀಲ್ ತಿಳಿಸಿದರು.

ಆಗಸ್ಟ್ ೨೦೨೩ ರಿಂದ ಇಲ್ಲಿಯವರೆಗೆ ಒಟ್ಟು ೧೧೯ ಮಸೂದೆಗಳನ್ನು ಅಂಗೀಕರಿಸಲಾಗಿದೆ ಮತ್ತು ಈ ಪೈಕಿ ೮೩ ಮಸೂದೆಗಳನ್ನು ಕಾನೂನುಗಳಾಗಿ ಸೂಚಿಸಲಾಗಿದೆ ಎಂದರು. ಏಳು ಮಸೂದೆಗಳ ಕುರಿತು ರಾಜ್ಯಪಾಲರು ಸ್ಪಷ್ಟೀಕರಣವನ್ನು ಕೋರಿದ್ದಾರೆ. ನಾಲ್ಕು ಅವರ ಬಳಿ ಇವೆ ಮತ್ತು ಐದು ಮಸೂದೆಗಳನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗಿದೆ. ಈಗ ಇಪ್ಪತ್ತು ಮಸೂದೆಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತಿದೆ’ ಎಂದು ಅವರು ಹೇಳಿದರು. ಕಾನೂನು ನೀತಿಯನ್ನು ಜಾರಿಗೆ ತಂದು ಕಾನೂನು ಸುಧಾರಣೆಗೆ ಒತ್ತು ಕೊಟ್ಟಿದ್ದೇವೆ. ಬಡವರ ಪ್ರಕರಣಗಳಲ್ಲಿ ಆರು ತಿಂಗಳಲ್ಲಿ ಇತ್ಯರ್ಥಪಡಿಸುವ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಧೇಯಕಕ್ಕೆ ಅನುಮತಿ ಬೇಕಿದೆ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದು, ತಂಬಾಕು ಬೆಳೆಗಾರರ ಹಿತ ಕಾಪಾಡುವುದು, ವಕೀಲರ ಮೇಲಿನ ಹಿಂಸಾಚಾರ ತಡೆಯುವುದು, ಪರೀಕ್ಷಾ ಅಕ್ರಮ ತಡೆಯಲು ೧೦ ವರ್ಷಗಳ ಕಠಿಣ ಶಿಕ್ಷೆ ವಿಧಿಸುವಂತಹ ವಿಧೇಯಕಗಳನ್ನು ತಂದಿದ್ದೇವೆ ಎಂದು ಹೇಳಿದರು. ನಾಗರಿಕ ಸಂಘಟನೆಗಳು ಮತ್ತು ವಿರೋಧ ಪಕ್ಷ ಬಿಜೆಪಿಯ ಪ್ರಾತಿನಿಧ್ಯವನ್ನು ಉಲ್ಲೇಖಿಸಿ, ರಾಜ್ಯಪಾಲರು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಸೂಕ್ತ ಸ್ಪಷ್ಟೀಕರಣಗಳೊಂದಿಗೆ ಮರುಸಲ್ಲಿಕೆ ಮಾಡುವಂತೆ ಹಿಂತಿರುಗಿಸಿದ್ದಾರೆ. ಮಸೂದೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ದೆಹಲಿ ಮಹಾನಗರದ ಮಾದರಿಯಲ್ಲಿ ೭ ಪ್ರತ್ಯೇಕ ಮಹಾನಗರಗಳಾಗಿ ವಿಂಗಡಿಸಲು ಪ್ರಸ್ತಾಪಿಸುತ್ತದೆ ಎಂದು ಗಮನಿಸಿದ ರಾಜ್ಯಪಾಲರು, “ಆದರೆ ಈ ಪ್ರಯೋಗ ದೆಹಲಿಯಲ್ಲಿ ವಿಫಲವಾಗಿದೆ ಮತ್ತು ಇಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಬಹುದು. ಆದ್ದರಿಂದ, ಇದನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.

ಉದ್ದೇಶಿತ ಏಳು ಮಹಾನಗರ ಪಾಲಿಕೆಗಳ ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ರಚಿಸಲು ಮಸೂದೆ ಪ್ರಸ್ತಾಪಿಸಿದ್ದು, ಇದು ಸಂವಿಧಾನದ ೭೪ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ಚುನಾಯಿತ ಸ್ಥಳೀಯ ಸಂಸ್ಥೆಗಳ ಅಧಿಕಾರದಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗಬಹುದು ಎಂದು ಗೆಹ್ಲೋಟ್ ಗಮನಸೆಳೆದಿದ್ದಾರೆ. “ಆದ್ದರಿಂದ, ಈ ಸಮಸ್ಯೆಯನ್ನು ಮರುಪರಿಶೀಲಿಸಬೇಕಾಗಿದೆ”. “ನಾನು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ, ೨೦೨೫ ರ ಬಗ್ಗೆ ಪ್ರಾತಿನಿಧ್ಯಗಳು ಮತ್ತು ಅವುಗಳ ಕಾಳಜಿ ಎರಡನ್ನೂ ಪರಿಶೀಲಿಸಿದ್ದೇನೆ. ಮುಂದುವರಿಯುವ ಮೊದಲು, ಎರಡೂ ಜ್ಞಾಪಕ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಕಾಳಜಿಗಳನ್ನು ಸ್ಪಷ್ಟಪಡಿಸಬೇಕಾಗಿದೆ. ಏಕೆಂದರೆ ಇದು ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿ ಸಮಸ್ಯೆಗಳನ್ನು ಒಳಗೊಂಡಿದೆ” ಎಂದು ರಾಜ್ಯಪಾಲರು ಹೇಳಿದ್ದಾರೆ.