ರಾಮನಗರ : ಬಿಡದಿ ಭೂ ಸ್ವಾಧೀನ ವಿಚಾರವಾಗಿ ಪರಿಹಾರಕ್ಕೆ ನಮ್ಮ ತಾಯಿ ಅರ್ಜಿ ಹಾಕಿದ್ರೆ ಅದನ್ನ ಬಡವರಿಗೆ ಕೊಟ್ಟು ಬಿಡುತ್ತೇವೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ನಟರಾಜ್ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ಬರೆದಿರುವ ಪತ್ರ ಬಿಡುಗಡೆ ಮಾಡಿದ್ದಾರೆ. ನೋಟಿಫಿಕೇಷನ್ ಆಗಿ, ಪತ್ರಿಕೆಗಳಲ್ಲಿ ಪ್ರಕಟಗೊಂಡ ಮೂರೇ ದಿನಕ್ಕೆ ಅನಿತಾ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ. ಅಲ್ಲದೇ ನಿಖಿಲ್ ಕುಮಾರಸ್ವಾಮಿ ಕೂಡ ಅರ್ಜಿ ಹಾಕಿದ್ದಾರೆ. ನನ್ನ ಹೆಸರಲ್ಲಿ ಖಾತೆ ಇದೆ, ವಿನಯ್ ಗೌಡ ಎಂಬವರಿಗೆ ಕಾರಣಾಂತರಗಳಿಂದ ಎಸ್‌ಪಿಎ ಮಾಡಿದ್ದೆವು. ಸದ್ಯ ಅದನ್ನ ಹಿಂಪಡೆದಿದ್ದೇವೆ.
ಹೊಸೂರು, ಬನ್ನಿಗಿರಿ ಗ್ರಾಮದಲ್ಲಿರುವ ಭೂಮಿ ಭೂಸ್ವಾಧೀನವಾದಲ್ಲಿ ಎಲ್ಲಾ ನೋಟಿಸ್ ಹಾಗೂ ದಾಖಲೆಗಳನ್ನ ನನ್ನ ವಿಳಾಸಕ್ಕೆ ಕಳುಹಿಸಿ ಎಂದು ಅರ್ಜಿಯಲ್ಲಿ ಬರೆದಿದ್ದಾರೆ. ಅದರ ಅರ್ಥ ಸ್ವಾಧೀನವಾದ್ರೆ ನಮಗೆ ಏನು ಇದೆ ಅದನ್ನ ಕೊಡಬೇಕು ಅಂತ ತಾನೆ? ನಿಖಿಲ್ ಕುಮಾರಸ್ವಾಮಿ ಡಿಕೆ ಶಿವಕುಮಾರ್ ಬಗ್ಗೆ ಮಾತಾಡಿದ್ದಾರೆ. ಮೊದಲು ವಿಚಾರ ತಿಳಿದುಕೊಂಡು ಮಾತನಾಡಲಿ ಎಂದರು.
ನಮ್ಮ ತಾಯಿ ಅರ್ಜಿ ಹಾಕಿದ್ರೆ, ಆಸ್ತಿ ಸರ್ಕಾರಕ್ಕೆ ಬಿಡುತ್ತೇನೆ, ಅಲ್ಲಿನ ಬಡರೈತರಿಗೆ ದಾನ ಕೊಡುತ್ತೇನೆ ಅಂತ ನಿಖಿಲ್ ಹೇಳಿದ್ದಾರೆ. ನಾನು ಸವಾಲು ಹಾಕ್ತೇನೆ ಯಾವಾಗ ರೈತರಿಗೆ ಬಿಟ್ಟುಕೊಡ್ತೀರಾ ಹೇಳಿ? ದಿನಾಂಕ ನಿಗದಿ ಮಾಡಿ ಜಿಬಿಡಿಎ ಮುಖಾಂತರವೇ ರೈತರ ಹೆಸರಿಗೆ ಮಾಡಿಕೊಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಸವಾಲು ಹಾಕಿದ್ದಾರೆ ಎಂದು ಹೇಳಲಾಗಿದೆ.















